ದಾವಣಗೆರೆ: ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮಹಾಸಭದ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ನಿರ್ಣಯಗಳನ್ನು ಮಂಡಿಸಿದ್ದಾರೆ.
ದೇಶದ ಏಕತೆ, ಅಖಂಡತೆ, ಸಮಗ್ರತೆ ಭದ್ರತೆಯ ರಕ್ಷಣೆಗೆ ಮಹಾಸಭೆ ಹಾಗೂ ಸಮಾಜ ಸದಾ ಕಟ್ಟಿಬದ್ಧವಾಗಿದ್ದು, ಅಂತಹ ಯಾವುದೇ ಹೋರಾಟ ಪ್ರಯತ್ನಗಳಿಗೆ ಹಿಂದಿನಂತೆಯೇ ಪ್ರೋತ್ಸಾಹ ಬೆಂಬಲ ನೀಡಲಾಗುವುದು.
ಜಗಜ್ಯೋತಿ ಬಸವೇಶ್ವರರ ಚಿಂತನೆ ಸಾರ್ವಕಾಲಿಕವಾಗಿದ್ದು, ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಬಸವ ತತ್ವ ಪರಿಪಾಲನೆ ಪರಮಾನ್ನವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು.
ವೀರಶೈವ ಲಿಂಗಾಯಿತ ಸಮುದಾಯದ ಎಲ್ಲಾ ಒಳಪಂಗಡಗಳನ್ನು ಒಳಗೊಂಡಂತೆ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಇದನ್ನು ಅಂಗೀಕರಿಸಬೇಕು.
ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಸಮೀಕ್ಷೆ ಅಂದರೆ ಜಾತಿಗಣತಿ 8 ವರ್ಷ ಹಳೆಯದಾಗಿದ್ದು, ಅದನ್ನು ಒಪ್ಪಿಕೊಳ್ಳದೆ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳನ್ನು ಒಳಗೊಂಡಂತೆ ವಾಸ್ತವಿಕತೆಯ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸ್ಥಿತಿಗತಿಯ ಹಿಂದುಳಿದಿರುವುಕೆ ಆಧಾರದ ಮೇಲೆ ವೈಜ್ಞಾನಿಕ ಜಾತಿ ಗಣತಿ ಆಗಬೇಕು.
ಸರ್ಕಾರ ಮುಂದಿನ ದಿನಗಳಲ್ಲಿ ನಡೆಸುವ ಜನ ಗಣತಿ ವೇಳೆ ವೀರಶೈವ ಲಿಂಗಾಯತ ಧರ್ಮ ಎಂದು ಬರೆಸಬೇಕು.
ಎಸ್. ನಿಜಲಿಂಗಪ್ಪನವರ ನಿವಾಸವನ್ನು ಸರ್ಕಾರ ಖರೀದಿಸಿ ಸಂರಕ್ಷಿಸಿ ಅಭಿವೃದ್ಧಿಪಡಿಸಿ ಶಾಶ್ವತ ಸ್ಮಾರಕ ನಿರ್ಮಾಣ ಕ್ಕೆ ಮುಂದಾಗಬೇಕು.