ಬೆಂಗಳೂರು : ‘ಆಸ್ತಿ ಸಂರಕ್ಷಣಾ ಅಭಿಯಾನ’ ಆಂದೋಲನದ ಕುರಿತು ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ‘ಶಿಕ್ಷಣ ಇಲಾಖೆ’ ಮಹತ್ವದ ಸುತ್ತೋಲೆ ಹೊರಡಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಸರ್ಕಾರದಿಂದ ಸರ್ಕಾರಿ ಶಾಲೆಗಳಿಗೆ ಮಂಜೂರಾಗಿರುವ ಜಾಗಗಳು, ಜಮೀನುಗಳು ಹಾಗೂ ಅನೇಕ ದಾನಿಗಳು. ಶಿಕ್ಷಣ ಪ್ರೇಮಿಗಳು ಸರ್ಕಾರಿ ಶಾಲೆಗಳಿಗೆ ದಾನವಾಗಿ ನೀಡಿರುವ ತಮ್ಮ ನಿವೇಶನ, ಜಾಗ, ಜಮೀನು ಆಯಾ ಸರ್ಕಾರಿ ಶಾಲೆಯ ಹೆಸರಿಗೆ ಖಾತೆ ಆಗದೇ ಕೆಲವು ಸಂದರ್ಭಗಳಲ್ಲಿ ಒತ್ತುವರಿಗೊಂಡು, ಸರ್ಕಾರಿ ಶಾಲಾ ಆಸ್ತಿ ಇತರರ ಪಾಲಾಗುವ ಸಂಭವ ಇರುತ್ತದೆ. ಸರ್ಕಾರಿ ಶಾಲೆಗಳ ಸದರಿ ಆಸ್ತಿಗಳು ಕಾನೂನು ಪ್ರಕಾರ ಆಯಾ ಸರ್ಕಾರಿ ಶಾಲೆಯ ಹೆಸರಿಗೆ ಸಕಾಲದಲ್ಲಿ ಖಾತೆಯಾಗದೇ ಇರುವುದರಿಂದ ಅನೇಕ ಸಂದರ್ಭಗಳಲ್ಲಿ ನ್ಯಾಯಾಲಯದಲ್ಲಿ ಪ್ರಕರಣಗಳು ಸಹ ದಾಖಲಾಗುವ ಸನ್ನಿವೇಶ ನಿರ್ಮಾಣವಾಗುತ್ತದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಪ್ರಾಥಮಿಕ, ಸರ್ಕಾರಿ ಪ್ರೌಢ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಜಾಗ, ಜಮೀನು, ನಿವೇಶನ ಮತ್ತು ಕಟ್ಟಡಗಳ ಆಸ್ತಿಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಸರ್ಕಾರದ / ಸಂಬಂಧಿಸಿದ ಇಲಾಖೆಗಳ ಸುತ್ತೋಲೆಗಳ ಅನುಸಾರ ಈ ಹಿಂದಿನಿಂದಲೂ ಕ್ರಮವಹಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಡಿಸೆಂಬರ್-2023 ರಿಂದ ಫೆಬ್ರವರಿ-2024 ರವರೆಗಿನ ತ್ರೈಮಾಸಿಕ ಅವಧಿಯಲ್ಲಿ ” ಸರ್ಕಾರಿ ಶಾಲಾ/ ಸರ್ಕಾರಿ ಶಿಕ್ಷಣ ಸಂಸ್ಥೆಯ ಆಸ್ತಿ ಸಂರಕ್ಷಣಾ ಅಭಿಯಾನ / ಆಂದೋಲನ ” ವನ್ನು ನಿಯಮಾನುಸಾರ ಕೈಗೊಂಡು, ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳ / ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆಸ್ತಿಗಳನ್ನು ಆಯಾ ಸರ್ಕಾರಿ ಶಾಲೆಯ / ಸರ್ಕಾರಿ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಖಾತೆ ಮಾಡಿಸಲು ಬಾಕಿಯಿರುವ ಪ್ರಕರಣಗಳಲ್ಲಿ ಸದರಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಸರ್ಕಾರಕ್ಕೆ ಯಥಾವತ್ತಾಗಿ ವರದಿ ಮಾಡಲು ಮತ್ತು ಶಾಲಾ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಯಾವುದಾದರೂ ಸರ್ಕಾರಿ ಶಾಲಾ / ಸರ್ಕಾರಿ ಶಿಕ್ಷಣ ಸಂಸ್ಥೆಯ ಸ್ಥಿರಾಸ್ತಿ (ಜಾಗ / ಜಮೀನು / ನಿವೇಶನ / ಕಟ್ಟಡ) ಒತ್ತುವರಿ / ಅತಿಕ್ರಮಣ ಆಗಿದ್ದಲ್ಲಿ, ಅದನ್ನು ತೆರವುಗೊಳಿಸಿ, ಸಂಬಂಧಿಸಿದವರ ಸುಪರ್ದಿಗೆ ನೀಡಲು ಹಾಗೂ ಸದರಿ ಸ್ಥಿರಾಸ್ತಿಗಳನ್ನು ನಿರಂತರವಾಗಿ / ಶಾಶ್ವತವಾಗಿ ಸಂರಕ್ಷಿಸಿಕೊಂಡು ಹೋಗಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳನ್ನು / ಜಿಲ್ಲಾಡಳಿತಗಳನ್ನು ಕೋರಲಾಗಿದೆ ಎಂದು ಸುತ್ತೋಲೆ ಹೊರಡಿಸಿದ್ದಾರೆ.