ಬೆಂಗಳೂರು: ದೇಶದಲ್ಲಿ ಜುಲೈ 1ರಿಂದ ಮೂರು ಹೊಸ ಕಾಯ್ದೆಗಳು ಅನುಷ್ಠಾನವಾಗಲಿದೆ. ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನೂತನ ಕಾನೂನುಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಆಡುಗೋಡಿಯ ಸಿಎಆರ್ ಮೈದಾನದಲ್ಲಿ ಶುಕ್ರವಾರ ನಡೆದ ಮಾಸಿಕ ಕವಾಯತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ದೇಶದಲ್ಲಿ ಜಾರಿಯಲ್ಲಿರುವ ಐಪಿಸಿ, ಸಿ.ಆರ್.ಪಿ.ಸಿ. ಮತ್ತು ಸಾಕ್ಷ್ಯ ಕಾಯ್ದೆಗಳು ಬದಲಾಗಿದೆ. ಈ ಕಾಯ್ದೆಗಳ ಬದಲಾಗಿ ಭಾರತೀಯ ನ್ಯಾಯ ಸಂಹಿತೆ. ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಸಂಹಿತೆ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ನೂತನ ಕಾನೂನುಗಳ ಹೊಸ ಸೆಕ್ಷನ್ ಗಳು ಏನು? ಹೊಸ ಮತ್ತು ಹಳೆ ಸೆಕ್ಷನ್ ಗಳ ಬದಲಾವಣೆ ಮತ್ತು ವ್ಯತ್ಯಾಸಗಳ ಬಗ್ಗೆ ತಿಳಿದುಕೊಳ್ಳಬೇಕು. ಜುಲೈ 1ರ ನಂತರ ಸಾರ್ವಜನಿಕರು ಠಾಣೆಗೆ ದೂರು ನೀಡಿದಲ್ಲಿ ನೂತನ ಕಾನೂನುಗಳ ಅನ್ವಯ ಎಫ್ಐಆರ್ ದಾಖಲಿಸಬೇಕು. ಹೀಗಾಗಿ ಯಾವ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಬೇಕು ಎಂಬುದರ ಬಗ್ಗೆ ಪೊಲೀಸ್ ಅಧಿಕಾರಿಗಳು ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಫ್ಐಆರ್ ದಾಖಲಿಸಬೇಕು ಎಂದು ಹೇಳಿದ್ದಾರೆ.