ಬಳ್ಳಾರಿ: ದೇವರ ಮೂರ್ತಿ ಕೂರಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೊಳಗಲ್ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, 50 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಪವಾಡ ಪುರುಷ ಎರ್ರಿತಾತ ಸ್ವಾಮಿಯ ಮೂರ್ತಿ ಕೂರಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿದೆ ಎಂದು ತಿಳಿದು ಬಂದಿದೆ.
5 ದಿನಗಳ ಹಿಂದೆ ಎರ್ರಿಸ್ವಾಮಿ ಮಠದಲ್ಲಿ ರಾತ್ರೋರಾತ್ರಿ ಮೂರ್ತಿ ಕುರಿಸಲಾಗಿತ್ತು. ಈ ಮೂರ್ತಿಯನ್ನು ತೆರವುಗೊಳಿಸುವಂತೆ ಇನ್ನೊಂದು ಸಮುದಾಯದವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಮೂರ್ತಿ ತೆರವುಗೊಳಿಸಲು ಆದೇಶ ನೀಡಿತ್ತು. ಆದರೆ ಪವಾಡ ಪುರುಷನ ಮೂರ್ತಿಯನ್ನು ತೆರವುಗೊಳಿಸಲ್ಲ ಅಂತ ಮೊತ್ತೊಂದು ಸಮುದಾಯದವರು ಹಠ ಹಿಡಿದ್ದಾರೆ.
ಎರಡೂ ಸಮುದಾಯಗಳ ನಡುವೆ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಕಲ್ಲು ತೂರಾಟ ನಡೆದಿದೆ. ಉದ್ವಿಗ್ನಗೊಂಡ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕೊಳಗಲ್ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, 50 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.