ಬೆಂಗಳೂರು: ಹೃದಯಾಘಾತದಿಂದ ವಿಧಿವಶರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೇತ್ರದಾನದ ಮೂಲಕ ಸಾವಲ್ಲೂ ಸಾರ್ಥಕತೆ ಮೆರೆದಿದ್ದು, ಇದೀಗ ಪುನೀತ್ ಕಣ್ಣುಗಳು ನಾಲ್ವರ ಬಾಳಲ್ಲಿ ಬೆಳಕಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ಪುನೀತ್ ರಾಜ್ ಕುಮಾರ್ ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಲಾಗಿದೆ. ವಿನೂತನ ತಂತ್ರಜ್ಞಾನದ ಮೂಲಕ ಪುನೀತ್ ಎರಡು ಕಣ್ಣುಗಳು ನಾಲ್ವರಿಗೆ ದೃಷ್ಟಿ ನೀಡಲು ಸಹಾಯವಾಗುವಂತೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ರಾಜ್ಯದಲ್ಲಿಯೇ ಇದು ಮೊದಲ ಪ್ರಯೋಗವಾಗಿದೆ ಎಂದು ಹೇಳಿದರು.
ಕಣ್ಣಿನ ಮೇಲ್ಪದರವನ್ನು ಕಾರ್ನಿಯಲ್ ಕಾಯಿಲೆಯಿರುವ ಇಬ್ಬರು ರೋಗಿಗಳಿಗೆ ಕಸಿ ಮಾಡಿ ಅಳವಡಿಸಲಾಗಿದೆ. ಹಾಗೂ ಆಳವಾದ ಪದರವನ್ನು ಬೇರ್ಪಡಿಸಿ ಎಂಡೋಥೀಲಿಯಲ್ ಅಥವಾ ಆಳವಾದ ಕಾರ್ನಿಯಲ್ ಲೇಯರ್ ಕಾಯಿಲೆ ಇರುವ ರೋಗಿಗಳಿಗೆ ಕಸಿಮಾಡಲಾಯಿತು. ಆದ್ದರಿಂದ, ನಾಲ್ಕು ವಿಭಿನ್ನ ರೋಗಿಗಳಿಗೆ ದೃಷ್ಟಿ ಪುನಃಸ್ಥಾಪಿಸಲು ನಾವು ಎರಡು ಕಾರ್ನಿಯಾಗಳಿಂದ ನಾಲ್ಕು ವಿಭಿನ್ನ ಕಸಿಗಳನ್ನು ರಚಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿಸಿದರು.