ಬೆಂಗಳೂರು : ರಾಜ್ಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್ಎಚ್ಎಂ) ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಎನ್ಎಚ್ಎಂ ನೌಕರರ ಹಿತದೃಷ್ಟಿಯಿಂದ ನಮ್ಮ ಸರ್ಕಾರ ವಿಮಾ ಕವಚ ಯೋಜನೆ ಜಾರಿಗೊಳಿಸಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಎನ್ಎಚ್ಎಂ ಗುತ್ತಿಗೆ ನೌಕರರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವ ಈ ವಿಮಾ ಕವಚ ಯೋಜನೆ ಅಡಿಯಲ್ಲಿ 60 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಅಪಘಾತ ವಿಮೆ ಮತ್ತು 10 ಲಕ್ಷ ರೂಪಾಯಿಯ ಅವಧಿ ವಿಮೆ ಪರಿಚಯಿಸಲಾಗಿದೆ ಎಂದರು.
ನಮ್ಮ ಸರ್ಕಾರದ ಈ ಯೋಜನೆಯಿಂದಾಗಿ ರಾಜ್ಯದಲ್ಲಿ 25 ಸಾವಿರ ನೇರ ಗುತ್ತಿಗೆ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ. ಆಕ್ಸಿಸ್ ಬ್ಯಾಂಕ್ ಉಚಿತವಾಗಿ ವಿಮಾ ಸೌಲಭ್ಯ ಕಲ್ಪಿಸಿದ್ದು, ನೌಕರರು ಯಾವುದೇ ಪ್ರೀಮಿಯಂ ಭರಿಸುವ ಅವಶ್ಯಕತೆಯಿಲ್ಲ. ನಾಡಿನ ಜನರ ಆರೋಗ್ಯ ರಕ್ಷಣೆಗಾಗಿ ಕಾರ್ಯ ನಿರ್ವಹಿಸುವ ಎನ್ಎಚ್ಎಂ ಗುತ್ತಿಗೆ ಸಿಬ್ಬಂದಿಯ ಸಾಮಾಜಿಕ ಭದ್ರತೆಗೆ ನಮ್ಮ ಸರ್ಕಾರ ಸದಾ ಸಿದ್ದ ಎಂದಿದ್ದಾರೆ.