ನ್ಯೂಯಾರ್ಕ್, ಯುಎಸ್: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರಕ್ಕೆ ಭಾರತ ತಿರುಗೇಟು ನೀಡಿದೆ.
ಭಾರತದ ಪ್ರತಿನಿಧಿ ಸ್ನೇಹಾ ದುಬೆ ಅವರು ಶುಕ್ರವಾರ 76 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ(ಯುಎನ್ ಜಿಎ) ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವರ್ಚುವಲ್ ಭಾಷಣ ‘ಸುಳ್ಳು ಮತ್ತು ದುರುದ್ದೇಶಪೂರಿತ’ವಾಗಿದೆ ಎಂದು ಟೀಕಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿಗೆ ತಿರುಗೇಟು ನೀಡಿದ ದುಬೆ, ದುರದೃಷ್ಟವಶಾತ್ ಪಾಕಿಸ್ತಾನದ ನಾಯಕ ವಿಶ್ವಸಂಸ್ಥೆ ವೇದಿಕೆಗಳನ್ನು ನನ್ನ ದೇಶದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ವ್ಯರ್ಥವಾಗಿ ಪ್ರಯತ್ನಿಸುವುದು ಇದೇ ಮೊದಲಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾಷಣದ ಸಮಯದಲ್ಲಿ ಖಾನ್, ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಭಾರತೀಯ ಸರ್ಕಾರವನ್ನು ಟೀಕಿಸಿದರು, ಇದನ್ನು ಅವರ ಇತ್ತೀಚಿನ ಹಲವಾರು ಭಾಷಣಗಳಲ್ಲಿ ಅವರು ಮಾಡಿದ್ದಾರೆ.
ಇದಕ್ಕೆ ತಮ್ಮ ಭಾಷಣದಲ್ಲಿ ತಿರುಗೇಟು ನೀಡಿದ ದುಬೆ ಅವರು, ಪಾಕಿಸ್ತಾನ ಭಯೋತ್ಪಾದಕರನ್ನು ಆಶ್ರಯಿಸುವ, ಮತ್ತು ಅವರಿಗೆ ಸಹಾಯ ಸಹಾಯ ಮಾಡುವ ಮತ್ತು ಸಕ್ರಿಯವಾಗಿ ಬೆಂಬಲಿಸುವ ಇತಿಹಾಸ ಮತ್ತು ನೀತಿ ಹೊಂದಿದೆ ಎಂದು ದೂರಿದ್ದು, ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ತೊರೆಯುವಂತೆ ತಾಕೀತು ಮಾಡಿದ್ದಾರೆ.
ಭಯೋತ್ಪಾದಕರನ್ನು ಬಹಿರಂಗವಾಗಿ ಬೆಂಬಲಿಸುವ, ಅವರಿಗೆ ತರಬೇತಿ, ಹಣಕಾಸು ನೆರವು ನೀಡುವ ಮತ್ತು ರಾಜ್ಯನೀತಿಯಂತೆ ಭಯೋತ್ಪಾದಕರನ್ನು ಶಸ್ತ್ರಸಜ್ಜಿತಗೊಳಿಸುವ ದೇಶ ಪಾಕಿಸ್ತಾನ ಎಂದು ಗುರುತಿಸಲಾಗಿದೆ ಎಂದು ದುಬೆ ಹೇಳಿದರು.
ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿದ್ದು, ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತವೆ. ಇದರಲ್ಲಿ ಅಕ್ರಮವಾಗಿ ಪಾಕಿಸ್ತಾನದ ಹಿಡಿತದಲ್ಲಿರುವ ಪ್ರದೇಶಗಳನ್ನು ಒಳಗೊಂಡಿದೆ. ಪಾಕಿಸ್ತಾನ ತನ್ನ ಆಕ್ರಮಣದಲ್ಲಿನ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಏತನ್ಮಧ್ಯೆ, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಅವರು, ಭಾರತದ ನೆರೆಹೊರೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂದು ಪಾಕಿಸ್ತಾನದ ವಿರುದ್ಧ ಆರೋಪ ಮಾಡಿದ್ದಾರೆ.
ಅಫ್ಘಾನಿಸ್ತಾನದ ಬೆಳವಣಿಗೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಹೆಚ್ಚು ಎಚ್ಚರಿಕೆಯಿಂದ ಪರೀಕ್ಷಿಸಬೇಕಿದೆ. ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನದ ಪಾತ್ರವನ್ನು ಗಮನಿಸಬೇಕಿದೆ. ಅದು ಕ್ವಾಡ್ ಆಗಿರಲಿ ಅಥವಾ ಅದರ ಇತರ ಪಾಲುದಾರ ದೇಶಗಳು ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಶೃಂಗ್ಲಾ ಹೇಳಿದ್ದಾರೆ.