ಇತ್ತೀಚಿನ ದಿನಗಳಲ್ಲಿ ಹವಾಮಾನ ನಿರಂತರವಾಗಿ ಬದಲಾಗುತ್ತಲೇ ಇದೆ. ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಮೋಡ ಮುಸುಕಿದ ವಾತಾವರಣ ಆವರಿಸಿದೆ. ಕೆಲವು ಕಡೆಗಳಲ್ಲಿ ಭಾರಿ ವರ್ಷಧಾರೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಇದು ಮುಂಗಾರು ಪೂರ್ವ ಮಳೆಯಾಗಿದ್ದು, ಇನ್ನೂ ಕೆಲ ದಿನಗಳವರೆಗೆ ವಾತಾವರಣ ಇದೇ ರೀತಿ ಮುಂದುವರೆಯಲಿದೆ. ಇನ್ನು ಅಂಡಮಾನ್-ನಿಕೋಬಾರ್ ದ್ವೀಪ ಸಮೂಹದಲ್ಲಿ ಇದೇ ಮೇ 15ರಂದು ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.
ಮುಂದಿನ 5 ದಿನಗಳ ಕಾಲ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಬಿರುಗಾಳಿ ಸಮೇತ ಮಳೆ ಸುರಿಯಲಿದೆ. ಆ ಸಮಯದಲ್ಲಿ ಗಾಳಿಯ ವೇಗ ಏನಿಲ್ಲ ಅಂದರೂ ಪ್ರತಿ ಗಂಟೆಗೆ 40-50 ಕಿಲೋಮೀಟರ್ ಇರಲಿದೆ.
ಹವಾಮಾನ ಇಲಾಖೆ ಪ್ರಕಾರ ಕೇರಳದಲ್ಲಿಯೂ ಸಹ ಮುಂಗಾರು ಈ ವರ್ಷ ಮುಂಚಿತವಾಗಿ ಆಗಮನವಾಗಿದೆ. IMD ಹೇಳಿರೋ ಪ್ರಕಾರ ಭಾರತದ ದಕ್ಷಿಣ ರಾಜ್ಯಗಳನ್ನ ಹೊರತುಪಡಿಸಿ ಪಶ್ಚಿಮ ರಾಜ್ಯಗಳಲ್ಲೂ ಮುಂಗಾರು ಮಳೆ ಎಂದಿಗಿಂತ ಬೇಗನೇ ಆಗಮನ ಆಗುವ ಸಾಧ್ಯತೆ ಇದೆ.
ಇತ್ತೀಚಿನ ದಿನಗಳಲ್ಲಿ ತಾಪಮಾನ ಒಂದೇ ಸಮನೆ ಏರಿಕೆಯಾಗುತ್ತಿತ್ತು. ಇದರಿಂದ ಜನರು ಬೇಸತ್ತು ಹೋಗಿದ್ದರು. ಆದರೆ ಈಗ ತಂಪಾದ ವಾತಾವರಣ ಆವರಿಸಿಕೊಂಡು, ತುಂತುರು ಮಳೆಯಾಗುತ್ತಿದ್ದರಿಂದ ಜನರು ಕೊಂಚ ಮಟ್ಟಿಗೆ ನೆಮ್ಮದಿಯಿಂದ ಉಸಿರಾಡುವಂತಾಗಿದೆ.