alex Certify ರಂಜಾನ್ ಮೊದಲೇ ಐಎಂಎ ಆಸ್ತಿ ಹರಾಜು ಹಾಕಿ ಸಂತ್ರಸ್ತರಿಗೆ ಪರಿಹಾರ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಂಜಾನ್ ಮೊದಲೇ ಐಎಂಎ ಆಸ್ತಿ ಹರಾಜು ಹಾಕಿ ಸಂತ್ರಸ್ತರಿಗೆ ಪರಿಹಾರ ವಿತರಣೆ

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡ ಅರ್ಹ ಸಂತ್ರಸ್ತ ಠೇವಣಿದಾರರಿಗೆ ರಂಜಾನ್ ಹಬ್ಬಕ್ಕೂ ಮೊದಲೇ ನಿಗದಿತ ಪರಿಹಾರ ವಿತರಿಸಲು ಸರ್ಕಾರ ಮುಂದಾಗಿದೆ.

ಕಂದಾಯ ಸಚಿವ ಕೃಷ್ಣ  ಬೈರೇಗೌಡ ಸೋಮವಾರ ವಿಕಾಸಸೌಧದ ಕಚೇರಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ರಿಜ್ವಾನ್ ಅರ್ಷದ್,  ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ರಹಮದ್ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿ ನಿರ್ಧಾರ ಕೈಗೊಂಡಿದ್ದಾರೆ.

ಐಎಂಎ ಹಗರಣದ ಮೊತ್ತ, ಇದುವರೆಗೆ ಎಷ್ಟು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಂಸ್ಥೆ ಸ್ಥಿರಾಸ್ತಿ, ಚರಾಸ್ತಿ ಮೌಲ್ಯವೆಷ್ಟು, ಕಳೆದ 7 ವರ್ಷದಲ್ಲಿ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಕಳೆದುಕೊಂಡವರ ಬಗ್ಗೆ ಎಷ್ಟು ಮಂದಿಗೆ ಹಣ ಹಿಂತಿರುಗಿಸಲಾಗಿದೆ. ಉಳಿದ ಸಂತ್ರಸ್ತರಿಗೆ ಯಾವಾಗ ಹೇಗೆ ಹಣ ಹಿಂತಿರುಗಿಸಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಸಂತ್ರಸ್ತರ ಜೊತೆಗೂ ಮಾತನಾಡಿದ ಕೃಷ್ಣ ಬೈರೇಗೌಡ, ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋದವರಿಗೆ ಅವರ ಹೂಡಿಕೆಯ ಅನುಪಾತದ ಆಧಾರದಲ್ಲಿ ಪರಿಹಾರವನ್ನು ರಂಜಾನ್ ಹಬ್ಬಕ್ಕೂ ಹತ್ತು ದಿನ ಮೊದಲೇ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ದುಪ್ಪಟ್ಟು ಹಣ ಪಡೆಯುವ ಆಸೆಯಿಂದ ಒಂದು ಲಕ್ಷಕ್ಕೂ ಅಧಿಕ ಠೇವಣಿದಾರರು 3213.58 ಕೋಟಿ ಗಳನ್ನು ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. 1400 ಕೋಟಿ ರೂ.ಗಳನ್ನು ಲಾಭಾಂಶದ ಮಾದರಿಯಲ್ಲಿ ಠೇವಣಿದಾರರಿಗೆ ಐಎಂಎ ಕಾಲಕಾಲಕ್ಕೆ ನೀಡುತ್ತಾ ಬಂದಿದೆ. ಹಗರಣ ಬೆಳಕಿಗೆ ಬಂದ ಬಳಿಕ ವಿಶೇಷ ಕೋರ್ಟ್ ಆದೇಶದಂತೆ ಕಂಪನಿ ಖಾತೆಯಲ್ಲಿದ್ದ 19.12 ಕೋಟಿ ರೂಗಳನ್ನು 50,000 ನಂತೆ 6858 ಸಂತ್ರಸ್ತರ ಖಾತೆಗಳಿಗೆ 2022ರ ಏಪ್ರಿಲ್ ನಲ್ಲಿ ಜಮೀನ್ ಮಾಡಲಾಗಿದೆ.

ಅದೇ ರೀತಿ ಹಂತ ಹಂತವಾಗಿ ಸಂತ್ರಸ್ತರ ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ. ಐಎಂಎಗೆ ಸಂಬಂಧಿಸಿದ 10ಕ್ಕೂ ಹೆಚ್ಚು ಆಸ್ತಿಗಳನ್ನು ಸರ್ಕಾರ ಈಗಾಗಲೇ ವಶಕ್ಕೆ ಪಡೆದುಕೊಂಡಿದೆ. 106.92 ಕೋಟಿ ಮೌಲ್ಯದ ಚರಾಸ್ತಿ, 401.92 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ವಶಕ್ಕೆ ಪಡೆಯಲಾಗಿದ್ದು, ಕಂಪನಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ 2.88 ಕೋಟಿ ನಗದು 11 ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಪತ್ರ ಸೇರಿ 534 ಕೋಟಿ ರೂ.ಗಳನ್ನು ಸರ್ಕಾರ ಮುಟ್ಟುಗೊಲು ಹಾಕಿಕೊಂಡಿದೆ. ನ್ಯಾಯಮೂರ್ತಿ ಎಂ .ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಆದೇಶದಂತೆ ಶೀಘ್ರವೇ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಹರಾಜು ಪ್ರಕ್ರಿಯೆ ನಡೆಸಿ ಅದರಿಂದ ಬಂದ ಹಣವನ್ನು ಹೂಡಿಕೆದಾರರಿಗೆ ಹಿಂತಿರುಗಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...