
ಲೇಕ್ ಹೈಗ್ಲ್ಯಾಂಡ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಈಕೆಗೆ 18 ವರ್ಷ ವಯಸ್ಸು. ಗ್ರ್ಯಾಜುಯೇಷನ್ ಸಮಾರಂಭದ ದಿನದಂದು ಈಕೆ ಆಡಿದ ಒಂದೊಂದು ಮಾತುಗಳು ನೆಟ್ಟಿಗರ ಮನತಟ್ಟಿದೆ.
ನನಗೂ ಕನಸುಗಳಿವೆ. ನಾನೂ ಭರವಸೆ ಹಾಗೂ ಮಹತ್ವಾಕಾಂಕ್ಷೆಗಳನ್ನ ಹೊಂದಿದ್ದೇನೆ. ಇಂದು ಪದವಿಯನ್ನ ಪಡೆದ ಪ್ರತಿಯೊಬ್ಬ ಹುಡುಗಿಯೂ ಮಾತನಾಡುತ್ತಾಳೆ. ನಾವೆಲ್ಲರೂ ಉತ್ತಮ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ನಮ್ಮ ಒಪ್ಪಿಗೆಯನ್ನ ಪಡೆಯದೇ ಭವಿಷ್ಯದಲ್ಲಿ ನಾವು ಕೈಗೊಳ್ಳಬೇಕಾದ ನಿರ್ಧಾರಗಳನ್ನ ನಮ್ಮಿಂದ ಕಸಿಯಲಾಗಿದೆ. ಗರ್ಭನಿರೋಧಕಗಳು ಕೆಲಸ ಮಾಡುವಲ್ಲಿ ವಿಫಲವಾಗಿಬಿಟ್ಟರೆ, ನನ್ನ ಮೇಲೆ ಅತ್ಯಾಚಾರವಾಗಿ ನಾನು ಗರ್ಭವತಿಯಾದರೆ ನನ್ನ ಭವಿಷ್ಯ ಏನಾಗಬಹುದು ಎಂದು ನಾನು ಭಯಭೀತಳಾಗಿದ್ದೇನೆ. ನಮ್ಮ ದೇಹದ ಮೇಲೆ ನಮಗೆ ಅಧಿಕಾರವನ್ನ ನೀಡದ ಮಸೂದೆ ಇದು ಎಂದು ಆಕೆ ಭಾಷಣದಲ್ಲಿ ಹೇಳಿದ್ದಾಳೆ.
ಗರ್ಭಪಾತದ ಹಕ್ಕಿನ ಬಗ್ಗೆ ಬಹಳ ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಇದನ್ನ ನಿಷೇಧಿಸುವಂತ ಕಾನೂನಿನ ವಿರುದ್ಧ ಈಗಾಗಲೇ ಸಾಕಷ್ಟು ಮಹಿಳೆಯರು ಹೋರಾಟ ನಡೆಸಿದ್ದಾರೆ. ಈ ನಡುವೆ ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ. 6 ಮಿಲಿಯನ್ಗೂ ಅಧಿಕ ವೀವ್ಸ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.
ಟೆಕ್ಸಾಸ್ನಲ್ಲಿ ಹೃದಯ ಬಡಿತ ಎಂಬ ಹೆಸರಲ್ಲಿ ಕಾನೂನೊಂದು ಜಾರಿಗೆ ಬಂದಿದೆ. ಈ ಕಾನೂನಿನ ಪ್ರಕಾರ ಭ್ರೂಣದ ಹೃದಯ ಬಡಿತ ಪತ್ತೆಯಾಗಲು ಶುರುವಾದ ಬಳಿಕ ಗರ್ಭಿಣಿಯರು ಗರ್ಭಪಾತ ಮಾಡಿಸಿಕೊಳ್ಳುವಂತಿಲ್ಲ. ಇದರಿಂದ ಆರಂಭದ ದಿನಗಳಲ್ಲಿ ಗರ್ಭ ಧರಿಸಿದ ಬಗ್ಗೆ ಮಾಹಿತಿಯಿಲ್ಲದ ಮಹಿಳೆಯರಿಗೆ ತುಂಬಾನೇ ತೊಂದರೆಯಾಗುತ್ತೆ ಅನ್ನೋದು ಹಲವರ ವಾದವಾಗಿದೆ. ಟೆಕ್ಸಾಸ್ ಇಂತಹ ಮಸೂದೆಯನ್ನ ಅಂಗೀಕರಿಸಿದ 9ನೇ ರಾಜ್ಯವಾಗಿದೆ.