ನಿರ್ಮಾಣ ಕಾರ್ಮಿಕರಿಗೆ ಸೂಕ್ತವಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಕಾನೂನುಗಳೇ ಇದ್ದರೂ ಸಹ ಅವುಗಳ ಅನುಷ್ಠಾನ ಯಾವ ಮಟ್ಟಿಗೆ ದೇಶದಲ್ಲಿ ಸಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅದರಲ್ಲೂ ಎತ್ತರದ ಕಟ್ಟಡಗಳ ನಿರ್ಮಾಣದ ವೇಳೆ ಕಾರ್ಮಿಕರ ಸುರಕ್ಷತೆ ಇನ್ನಷ್ಟು ಆತಂಕ ಮೂಡಿಸುವಂತಿದೆ.
ಆಸ್ಟ್ರೇಲಿಯಾದ ಪತ್ರಕರ್ತರೊಬ್ಬರು ಶೇರ್ ಮಾಡಿದ ಇತ್ತೀಚಿನ ವಿಡಿಯೋವೊಂದು ಈ ವಿಚಾರದಲ್ಲಿನ ವಾಸ್ತವತೆಯನ್ನು ಹೊರ ಹಾಕಿದ್ದು, ಭಾರತದಲ್ಲಿ ನಿರ್ಮಾಣ ಕಾರ್ಮಿಕರು ಎದುರಿಸುತ್ತಿರುವ ಅಪಾಯಗಳ ಮೇಲೆ ಬೆಳಕು ಚೆಲ್ಲಿದೆ.
ಪೀಟರ್ ಲೆಲರ್ ಹೆಸರಿನ ಕ್ರಿಕೆಟ್ ವರದಿಗಾರರೊಬ್ಬರು ಟ್ವಿಟರ್‌ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಏಣಿಯೊಂದರ ಮೇಲೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ನಿಂತಿರುವ ಕಾರ್ಮಿಕರೊಬ್ಬರು ತಮ್ಮ ಸಹೋದ್ಯೋಗಿಗಳ ನೆರವಿನಿಂದ ಒಂಬತ್ತು ಅಂತಸ್ತುಗಳ ಎತ್ತರದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ರವಾನೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
“ಭಾರತೀಯ ನಿರ್ಮಾಣ ಕಾರ್ಮಿಕರು ಬಹಳ ಧೈರ್ಯವಂತರು. ಆದರೆ ತಮಗೆ ಇನ್ನಷ್ಟು ಸುರಕ್ಷತೆ ಬೇಕು ಎಂದು ಆಗ್ರಹಿಸಲು ಅವರಿಗೊಂದು ಸಂಘಟನೆ ಬೇಕು. ಇದು ಒಂಬತ್ತು ಅಂತಸ್ತುಗಳ ಎತ್ತರದಲ್ಲಿರುವುದು ಮತ್ತು ಇನ್ನೂ ಒಂಬತ್ತು ಅಂತಸ್ತುಗಳು ಬಾಕಿ ಇವೆ……” ಎಂದು ಲೇಲರ್ ಹೇಳಿಕೊಂಡಿದ್ದಾರೆ.