ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್‌ನಿಂದ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಗಾಯಕ ಮತ್ತು ರಾಪರ್ ಯೋ ಯೋ ಹನಿ ಸಿಂಗ್ ದೆಹಲಿಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ವರದಿಯ ಪ್ರಕಾರ ಗಾಯಕ ಹನಿಸಿಂಗ್ ಫೋನ್ ಕರೆಗಳು ಮತ್ತು ವಾಯ್ಸ್ ನೋಟ್ಸ್ ಮೂಲಕ ಬೆದರಿಕೆ ಕರೆ ಸ್ವೀಕರಿಸಿದ್ದಾರೆ.
ಜೂನ್ 21 ರಂದು ಹನಿಸಿಂಗ್ ಸ್ವತಃ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹನಿ ಸಿಂಗ್, “ನನಗೆ ಮತ್ತು ನನ್ನ ಸಿಬ್ಬಂದಿಗೆ ಗೋಲ್ಡಿ ಬ್ರಾರ್ ಸದಸ್ಯರು ಎಂದು ಹೇಳಿಕೊಳ್ಳುವ ಜನ ಫೋನ್ ಕರೆ ಮಾಡುತ್ತಿದ್ದಾರೆ. ನನಗೆ ಭದ್ರತೆ ಒದಗಿಸಿ ಮತ್ತು ಈ ಬಗ್ಗೆ ತನಿಖೆ ನಡೆಸುವಂತೆ ನಾನು ಆಯುಕ್ತರಿಗೆ ವಿನಂತಿಸಿದ್ದೇನೆ. ನಾನು ನಿಜವಾಗಿಯೂ ಹೆದರಿದ್ದೇನೆ. ಕಮಿಷನರ್ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ವಿವರಗಳನ್ನು ಬಹಿರಂಗಪಡಿಸಬೇಡಿ ಎಂದು ನನಗೆ ಹೇಳಿದ್ದಾರೆ. ನಾನು ಪೊಲೀಸರಿಗೆ ಎಲ್ಲಾ ಸಾಕ್ಷ್ಯಗಳನ್ನು ನೀಡಿದ್ದೇನೆ. ನನಗೆ ಇಂತಹ ಘಟನೆ ನಡೆದಿರುವುದು ಇದೇ ಮೊದಲು. ಜನರು ಯಾವಾಗಲೂ ನನಗೆ ಪ್ರೀತಿಯನ್ನು ನೀಡುತ್ತಾರೆ. ನನಗೆ ಭಯವಾಗಿದೆ, ನನ್ನ ಕುಟುಂಬವೂ ಹೆದರುತ್ತಿದೆ.
ಈ ಜಗತ್ತಿನಲ್ಲಿ ಒಂದೇ ಒಂದು ವಿಷಯಕ್ಕೆ ನನಗೆ ಭಯವಾಗುವುದೆಂದರೆ ಅದು ಸಾವು. ಅಂತರಾಷ್ಟ್ರೀಯ ಸಂಖ್ಯೆಗಳಿಂದ ಗೋಲ್ಡಿ ಬ್ರಾರ್ ಗ್ಯಾಂಗ್ ಹೆಸರಲ್ಲಿ ಕೆಲವು ಫೋನ್ ಕರೆಗಳು ಮತ್ತು ವಾಯ್ಸ್ ನೋಟ್ಸ್ ಬಂದಿವೆ. ನಾನು ನಿಮ್ಮೆಲ್ಲರಿಂದ ಏನನ್ನೂ ಮರೆಮಾಡಿಲ್ಲ, ಶೀಘ್ರದಲ್ಲೇ ಹೆಚ್ಚಿನ ವಿವರಗಳನ್ನು ನೀಡುತ್ತೇನೆ.” ಎಂದು ತಿಳಿಸಿದ್ದಾರೆ.
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಪ್ರಮುಖ ಆರೋಪಿ ಗೋಲ್ಡಿ ಬ್ರಾರ್ ಸದ್ಯ ಪರಾರಿಯಾಗಿದ್ದಾನೆ.
ಮೇ 2023 ರಲ್ಲಿ, ಕೆನಡಾದ ಸರ್ಕಾರವು ದೇಶದ ಟಾಪ್ 25 ವಾಂಟೆಡ್ ಕ್ರಿಮಿನಲ್‌ಗಳಲ್ಲಿ ಗೋಲ್ಡಿ ಬ್ರಾರ್ ನನ್ನು ಹೆಸರಿಸಿದೆ.