ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ ಸುರಂಗಮಾರ್ಗ ನಿಲ್ದಾಣದಲ್ಲಿ 40 ವರ್ಷದ ಏಷ್ಯನ್ ಮಹಿಳೆಯೋರ್ವರನ್ನ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ತಳ್ಳಿದ್ದಾನೆ. ರೈಲಿನ ಮುಂದೆ ತಳ್ಳಲ್ಪಟ್ಟ ನಂತರ ಆಕೆ ಸಾವನ್ನಪ್ಪಿದ್ದಾರೆ. ಆಕೆಯ ಸಾವಿಗೆ ಕಾರಣವಾಗಿರೊ ಆರೋಪಿಯನ್ನು ಬಂಧಿಸಲಾಗಿದೆ.
ಮ್ಯಾನ್‌ಹ್ಯಾಟನ್‌ನ ಅಪ್ಪರ್ ವೆಸ್ಟ್ ಸೈಡ್‌ನಲ್ಲಿ ವಾಸವಾಗಿದ್ದ ಮಿಚೆಲ್ ಅಲಿಸ್ಸಾ ಗೊ ಅವರು ಮೆಟ್ರೋ, ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದಾಗ ಹಿಂದಿನಿಂದ ತಳ್ಳಲ್ಪಟ್ಟರು. ಹಳಿಗಳ ಮೇಲೆ ಬಿದ್ದ ಅವರನ್ನ ನಿಲ್ದಾಣಕ್ಕೆ ಬಂದ ರೈಲು ಡಿಕ್ಕಿ ಹೊಡೆದಿದೆ.
ಸುರಂಗಮಾರ್ಗದ ಹಳಿಗಳ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಹಿಳೆಯನ್ನ ನೋಡಿದ ಪೊಲೀಸರು ಆಕೆಯನ್ನ ಬದುಕಿಸಲು ಪ್ರಯತ್ನಿಸಿದರಾದರೂ, ಆಕೆಯ ದೇಹಕ್ಕೆ ತೀವ್ರವಾದ ಗಾಯಗಳು ಮತ್ತು ಆಂತರಿಕ ಗಾಯಗಳು ಉಂಟಾಗಿದ್ದವು, ಇದರಿಂದ ಆಕೆ ಸಾವಿಗೀಡಾಗಿದ್ದಾರೆ.
ಬಂಧಿತ ಆರೋಪಿಯನ್ನ 61 ವರ್ಷದ ಸೈಮನ್ ಮಾರ್ಷಲ್ ಎಂದು ಗುರುತಿಸಲಾಗಿದ್ದು, ಕೊಲೆಯ ಆರೋಪದ ಮೇಲೆ ನ್ಯೂಯಾರ್ಕ್ ಪೊಲೀಸರು ಆತನನ್ನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕೃತ್ಯ ಎಸಗಿದ ನಂತರ ಸ್ಥಳದಿಂದ ಓಡಿಹೋದ, ಅವನೇ ಒಂದು ಗಂಟೆಯ ನಂತರ ಪೊಲೀಸರ ಬಳಿ ಹೋಗಿ ಶರಣಾಗಿದ್ದಾನೆ.
ವರದಿಗಳ ಪ್ರಕಾರ, ಆರೋಪಿ ಸೈಮನ್ ಮಾರ್ಷಲ್ ಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಹೇಳಲಾಗ್ತಿದೆ. ಕೃತ್ಯ ಎಸಗಲು ಕಾರಣ ಕೇಳಿದಾಗ ಅವಳು ನನ್ನ ಜಾಕೆಟ್ ಕದ್ದಿದ್ದಳು ಎಂದಿದ್ದಾನೆ. ಕ್ರಿಮಿನಲ್ ದಾಖಲೆಯನ್ನು ಹೊಂದಿರುವ ಸೈಮನ್ 2021 ರ, ಆಗಸ್ಟ್ ನಲ್ಲಿ ಬಿಡುಗಡೆಯಾಗಿದ್ದ.
ದರೋಡೆ ಅಪರಾಧದಲ್ಲಿ ಆತನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ನೀಡಲಾಗಿತ್ತು. ನೀನು ಮಿಚೆಲ್ ಅವ್ರನ್ನ ಕೊಂದಿದ್ದೀರಾ ಎಂದು ಕೇಳಿದಾಗ, “ಹೌದು ನಾನೇ ಕೊಂದಿದ್ದೇನೆ, ನಾನು ದೇವರು, ನಾನು ಏನು ಬೇಕಾದರು ಮಾಡಬಹುದು” ಎಂದು ಸೈಮನ್ ಉತ್ತರಿಸಿದ್ದಾನೆ.