ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ರಾಜ ಕಾಲುವೆ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಪ್ರಭಾವಿಗಳ ಕಟ್ಟಡವನ್ನೂ ಸಹ ತೆರವುಗೊಳಿಸಲಾಗಿದೆ. ಶಾಸಕ ಹ್ಯಾರಿಸ್ ಅವರಿಗೆ ಸೇರಿದ ಹ್ಯಾರಿಸ್ ಅಕಾಡೆಮಿ ಕಟ್ಟಡವನ್ನು ಇಂದು ತೆರವುಗೊಳಿಸಲಾಗಿದ್ದು, ಮತ್ತಷ್ಟು ಪ್ರಭಾವಿಗಳಿಗೆ ಈಗ ಸಂಕಷ್ಟ ಎದುರಾಗಿದೆ.
ಮೂಲಗಳ ಪ್ರಕಾರ ಐಟಿ ದಿಗ್ಗಜ ವಿಪ್ರೋ ಸೇರಿದಂತೆ ಹಲವು ದೊಡ್ಡ ದೊಡ್ಡ ಕಂಪನಿಗಳೂ ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡಿವೆ ಎನ್ನಲಾಗಿದ್ದು, ಈಗ ಯಾವುದೇ ಒತ್ತಡಗಳಿಗೆ ಮಣಿಯದೆ ಇವುಗಳ ತೆರವು ಕಾರ್ಯಚರಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ರಾಜ ಕಾಲುವೆ ಒತ್ತುವರಿ ಮಾಡಿಕೊಂಡಿರುವ ಪ್ರಮುಖರ ಪೈಕಿ ಬಾಗ್ಮನೆ ಟೆಕ್ ಪಾರ್ಕ್, ಇಕೋ ಸ್ಪೇಸ್, ಗೋಪಾಲನ್, ದಿಯಾ ಸ್ಕೂಲ್ ಮೊದಲಾದವುಗಳಿದ್ದು, ಇದರ ಜೊತೆಗೆ ನ್ಯೂ ಹಾರಿಜನ್ ಕಾಲೇಜ್, ಆದರ್ಶ್ ರೀ ಟ್ರೀಟ್, ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ ಮೊದಲಾದವುಗಳು ಪಟ್ಟಿಯಲ್ಲಿವೆ ಎನ್ನಲಾಗಿದೆ.
ಅತ್ಯಂತ ಪ್ರಭಾವಿಗಳಾಗಿರುವ ಇವರುಗಳ ಕಟ್ಟಡವನ್ನು ತೆರವುಗೊಳಿಸಲು ಬಿಬಿಎಂಪಿ ಮುಂದಾಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.