ತುಮಕೂರು : ಮಗುವಿನ ಕಿಡ್ನ್ಯಾಪ್ ಪ್ರಕರಣ ಬೆನ್ನತ್ತಿ ಹೋದ ಪೊಲೀಸರು ಮಕ್ಕಳ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಗುಬ್ಬಿ ಠಾಣೆಯ ಪೊಲೀಸರು ಬಂಧಿಸಿ ತನಿಖೆಗೊಳಪಡಿಸಿದ್ದಾರೆ.
ಒಂದೇ ಗ್ಯಾಂಗ್ 9 ಮಂದಿ ಮಕ್ಕಳನ್ನ ಮಾರಾಟ ಮಾಡಿದ್ದು, ಅವಿವಾಹಿತೆಯರೇ ಈ ಗ್ಯಾಂಗ್ ನ ಟಾರ್ಗೆಟ್ ಆಗಿತ್ತು. ಅಕ್ರಮ ಸಂಬಂಧದ ಮೂಲಕ ಹುಟ್ಟಿದ ಮಗುವನ್ನು ಮಕ್ಕಳು ಇಲ್ಲದವರಿಗೆ ಮಾರಾಟ ಮಾಡಲಾಗುತ್ತಿತ್ತು.
ಬಂಧಿತರನ್ನು ತುಮಕೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಮಹೇಶ್ (39) , ನರ್ಸ್ ಪೂರ್ಣಿಮಾ (39) ಸೌಜನ್ಯ (48) ಹಾಗೂ ಮೆಹಬೂಬ ಷರೀಪ್ (52) ಕೆ ಎನ್ ರಾಮಕೃಷ್ಣ (53) ಹನುಮಂತರಾಜು (45) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆಗೊಳಪಡಿಸಿದ್ದಾರೆ. ಜೂ.9ರಂದು ಗುಬ್ಬಿ ಪಟ್ಟಣದಲ್ಲಿ 11 ತಿಂಗಳ ರಾಕಿ ಎಂಬ ಗಂಡು ಮಗು ಅಪಹರಣವಾಗಿತ್ತು. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಗುವಿನ ಅಪಹರಣ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಮಕ್ಕಳ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಪತ್ತೆ ಹಚ್ಚಿದ್ದಾರೆ