
ಬಳ್ಳಾರಿ : ಸರ್ಕಾರಿ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ರೈತರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭರ್ಜರಿ ಸಿಹಿಸುದ್ದಿ ನೀಡಿದ್ದು, ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮುಂದಿನ ಒಂದು ವರ್ಷದಲ್ಲಿ ಈ ಎಲ್ಲಾ ಅರ್ಜಿಗಳೂ ವಿಲೇವಾರಿ ಆಗಬೇಕು. ಪ್ರತಿ ವಾರದ ಪ್ರಗತಿಯು ಆಪ್‍ನಲ್ಲಿ ಅಪ್‍ಡೇಟ್ ಆಗಬೇಕು. ಇಲ್ಲದಿದ್ದರೆ ತಹಶೀಲ್ದಾರ್ ಗಳಿಗೆ ನೋಟೀಸ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ನಗರದ ಜಿಲ್ಲಾಡಳಿತದ ಸಭಾಂಗಣದಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಬಳ್ಳಾರಿಯಲ್ಲಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ನಮೂನೆ 53ರ ಅಡಿಯಲ್ಲೇ ಸುಮಾರು 25,000 ಅರ್ಜಿಗಳು ಬಾಕಿ ಇವೆ. 1998ರಲ್ಲೇ ನಮೂನೆ 53 ರ ಅರ್ಜಿ ಕರೆಯಲಾಗಿತ್ತು. 25 ವರ್ಷ ಆದ್ರೂ ಈ ಅರ್ಜಿಗಳು ಇನ್ನೂ ವಿಲೇವಾರಿ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ನಮೂನೆ 57 ರ ಅರ್ಜಿಯೂ ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 1 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಮುಂದಿನ ಒಂದು ವರ್ಷದಲ್ಲಿ ಈ ಎಲ್ಲಾ ಅರ್ಜಿಗಳೂ ವಿಲೇವಾರಿ ಆಗಬೇಕು. ಪ್ರತಿ ವಾರದ ಪ್ರಗತಿಯು ಆಪ್‍ನಲ್ಲಿ ಅಪ್‍ಡೇಟ್ ಆಗಬೇಕು. ಇಲ್ಲದಿದ್ದರೆ ತಹಶೀಲ್ದಾರ್ ಗಳಿಗೆ ನೋಟೀಸ್ ನೀಡಲಾಗುತ್ತದೆ ಎಂದು ಅಧಿಕಾರಿಗಳನ್ನು ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಚರಿಸಿದರು.
ನಮೂನೆ 50, 53, 57ರ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೂ ಸಹ ಸಾಗುವಳಿ ಚೀಟಿ ನೀಡುವುದು ಅಸಾಧ್ಯ. ಹೀಗಾಗಿ ಬಗರ್ ಹುಕುಂ ತಂತ್ರಾಶದ ಮೂಲಕ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದು ನ್ಯಾಯಸಮ್ಮತವಾಗಲಿದೆ. ಅಲ್ಲದೆ, ಶೀಘ್ರ ಪ್ರಕ್ರಿಯೆಗೂ ಈ ಆಪ್ ಸಹಕಾರಿಯಾಗಲಿದೆ. ಶೀಘ್ರದಲ್ಲೇ ಈ ಆಪ್ ಅಧಿಕಾರಿಗಳ ಕೈಸೇರಲಿದೆ. ಈ ಆಪ್ ಸಹಾಯದೊಂದಿಗೆ ಅಧಿಕಾರಿಗಳು ತ್ವರಿತಗತಿಯಲ್ಲಿ ಬಹರ್ ಹುಕುಂ ಅರ್ಜಿ ವಿಲೇವಾರಿಗೊಳಿಸಬಹುದು ಎಂದು ತಿಳಿಸಿದರು.