ಶಿವಮೊಗ್ಗ: ಉಪ ಖನಿಜಗಳ ಅಕ್ರಮ ಗಣಿಗಾರಿಕೆ/ ಸಾಗಾಣಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ರಿವೆನ್ಷನ್ ಆಫ್ ಇಲ್ಲೀಗಲ್ ಮೈನಿಂಗ್, ಟ್ರಾನ್ಸ್ ಪೋರ್ಟ್ ಆಂಡ್ ಸ್ಟೋರೇಜ್ ಆಫ್ ಮೈನರಲ್ ರೂಲ್ 2011 ರೂಲ್(7)ರ ಅನ್ವಯ ಕಟ್ಟಡ ಕಲ್ಲು, ಜಲ್ಲಿ, ಎಂ ಸ್ಯಾಂಡ್, ಮರಳು ಹಾಗೂ ಮಣ್ಣು ಇತ್ಯಾದಿ ಉಪ ಖನಿಜ ಸಾಗಾಣಿಕೆ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್(GPS) ಉಪಕರಣಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳು/ ಜಿಲ್ಲಾ ಟಾಸ್ಕ್ ಪೋರ್ಸ್(ಗಣಿ) ಸಮಿತಿ ಅಧ್ಯಕ್ಷರಾದ ಡಾ. ಆರ್. ಸೆಲ್ವಮಣಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೆ ಒಟ್ಟು 583 ಖನಿಜ ಸಾಗಾಣಿಕೆ ವಾಹನಗಳಿಗೆ ಜಿಪಿಎಸ್ ಉಪಕರಣಗಳನ್ನು ಅಳವಡಿಸಲಾಗಿದ್ದು, ಜಿಪಿಎಸ್ ಉಪಕರಣವನ್ನು ಅಳವಡಿಸಿಕೊಳ್ಳದ/ ಜಿಪಿಎಸ್ ಉಪಕರಣವನ್ನು ಅಳವಡಿಕೆ ಮಾಡಿಕೊಂಡು ಒಂದು ಪರವಾನಿಗೆಯಿಂದ ಒಂದಕ್ಕಿಂತ ಹೆಚ್ಚು ಬಾರಿ ಮರಳು ಸಾಗಾಣಿಕೆ ಮಾಡಿರುವುದು, ವಾಹನ ಸಾಮರ್ಥ್ಯಕ್ಕಿಂತ ಕಡಿಮೆ ಪ್ರಮಾಣವನ್ನು ಪರವಾನಿಗೆಯಲ್ಲಿ ನಮೂದಿಸುವುದು, ಜಿ.ಪಿ.ಎಸ್. ಅಳವಡಿಸಿಕೊಂಡು ಸೇವಾದಾರ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿರಿಸಿಕೊಳ್ಳದ, ಪರವಾನಿಗೆ ಪ್ರಮಾಣಕ್ಕಿಂತ ಹೆಚ್ಚಿನ ಮರಳನ್ನು ಸಾಗಾಣಿಕೆ ಮಾಡುವಂತಹ ವಾಹನಗಳ ಮೇಲೆ ಕ.ಉ.ಖ.ರಿಯಾಯಿತಿ ನಿಯಮಾಳಿಯನ್ವಯ ಅಗತ್ಯ ಕ್ರಮಗಳನ್ನು ಕೈಗೊಂಡು ನಿಯಮಾನುಸಾರ ದಂಡ/ ಕಾನೂನು ಕ್ರಮ ಜರುಗಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.