
ಶಿವಮೊಗ್ಗ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಮಾ. 28 ರ ರಾತ್ರಿ ಸಾಗರ ಮಾರ್ಗವಾಗಿ ಬರುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಅಂದಾಜು 2,23,046 ರೂ.ಮೌಲ್ಯದ ಪರವಾನಗಿ ಇಲ್ಲದ ಒಟ್ಟು 51.84 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಅಬಕಾರಿ ಉಪ ಆಯುಕ್ತರು, ಅಬಕಾರಿ ಉಪ ಅಧೀಕ್ಷಕರು ಅವರ ಮಾರ್ಗದರ್ಶನದಲ್ಲಿ ಮಾ. 28 ರಂದು ರಾತ್ರಿ 9.45 ಕ್ಕೆ ಸಾಗರ ತಾಲ್ಲೂಕು ಕಾನಲೆ ಕ್ರಾಸ್ ಬಳಿ ರಸ್ತೆಗಾವಲು ನಡೆಸುತ್ತಿದ್ದಾಗ ಟಾಟಾ ಏಸ್ ಗೂಡ್ಸ್ ವಾಹನ ತಾಳಗುಪ್ಪ ಕಡೆಯಿಂದ ಸಾಗರ ಮಾರ್ಗವಾಗಿ ಬರುತ್ತಿದ್ದು ತಪಾಸಣೆ ನಡೆಸುವ ಸಲುವಾಗಿ ನಿಲ್ಲಿಸಲು ಸೂಚಿಸಲಾಗಿದೆ.
ವಾಹನವನ್ನು ನಿಲ್ಲಿಸದೇ ತಿರುಗಿಸುವ ಭರದಲ್ಲಿ ವಾಹನವು ಬಂದ್ ಆಗಿದ್ದು, ತಕ್ಷಣ ಚಾಲನೆ ಮಾಡುತ್ತಿದ್ದ ಓರ್ವ ವ್ಯಕ್ತಿಯು ವಾಹನದಿಂದ ಇಳಿದು ಓಡಿದ್ದಾನೆ.
ಆತನನ್ನು ಹಿಡಿಯಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರಯತ್ನಿಸಲಾಗಿ ಸಿಗದೇ ಕತ್ತಲೆಯಲ್ಲಿ ಓಡಿ ಮರೆಯಾಗಿರುತ್ತಾನೆ. ನಂತರ ಬಿಳಿ ಬಣ್ಣದ ಟಾಟಾ ಏಸ್ ವಾಹನದ ತಪಾಸಣೆ ನಡೆಸಲು ನಿರ್ಧರಿಸಿ ಎಫ್‍ಎಸ್‍ಟಿ -4ಸಿ ತಾಳಗುಪ್ಪರವರನ್ನು ಸ್ಥಳಕ್ಕೆ ಕರೆಸಿಕೊಂಡು ವಾಹನವನ್ನು ತಪಾಸಣೆ ನಡೆಸಲಾಗಿ ವಾಹನದ ಚಾಲಕನ ಸೀಟಿನ ಪಕ್ಕದ ಸೀಟಿನ ಮೇಲೆ ಮತ್ತು ಕೆಳಗೆ 2 ನೀಲಿ ಬಣ್ಣದ ಪ್ಲಾಸ್ಟಿಕ್ ಚೀಲಗಳಿದ್ದು, ಒಂದು ಚೀಲದಲ್ಲಿ 90 ಮಿ.ಲೀ ಒರಿಜಿನಲ್ ಚಾಯ್ಸ್ ವಿಸ್ಕಿ ಹೆಸರಿನ ಮದ್ಯ ತುಂಬಿದ 288 ಟೆಟ್ರಾ ಪ್ಯಾಕ್ ಗಳು ಹಾಗೂ ಎರಡನೇ ಚೀಲದಲ್ಲಿ 90 ಮಿ.ಲೀ ಕ್ಯಾಪ್ಟನ್ ಮಾರ್ಟಿನ್ ವಿಸ್ಕಿ ಹೆಸರಿನ 288 ಮದ್ಯ ತುಂಬಿದ ಟೆಟ್ರಾ ಪ್ಯಾಕ್‍ಗಳಿದ್ದು ಪರವಾನಿಗೆ ಇಲ್ಲದೆ ಒಟ್ಟು 51.84 ಲೀಟರ್ ಮದ್ಯ ವಾಹನದಲ್ಲಿ ದಾಸ್ತಾನು ಹೊಂದಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದದ್ದು ಕಂಡುಬಂದಿರುತ್ತದೆ.
ಆರೋಪಿತನು ದಾಳಿ ವೇಳೆ ತಲೆಮರೆಸಿಕೊಂಡಿದ್ದು, ಮದ್ಯ ಹಾಗೂ ವಾಹನವನ್ನುಜಪ್ತಿ ಮಾಡಿ ಮೊಕದ್ದಮೆ ದಾಖಲು ಮಾಡಲಾಗಿರುತ್ತದೆ. ವಾಹನ ಮತ್ತು ಮುದ್ದೆಮಾಲಿನ ಅಂದಾಜು ಮೌಲ್ಯ 2,23,046 ರೂಗಳಾಗಿರುತ್ತದೆ ಎಂದು ಹೇಳಲಾಗಿದೆ.