ಬೆಂಗಳೂರು: ಅಬಕಾರಿ ಇಲಾಖೆ ಅಕ್ರಮದ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಮತ್ತು ಉಪ ಲೋಕಾಯುಕ್ತ ಬಿ. ವೀರಪ್ಪ ಬೆಂಗಳೂರಿನ 62 ಅಬಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಾಳಿಯ ವೇಳೆ ದಾಖಲೆ ಇಲ್ಲದ 2 ಲಕ್ಷ ರೂಪಾಯಿ ನಗದು, ಅಕ್ರಮ ಗಾಂಜಾ, ಮದ್ಯದ ಬಾಟಲಿಗಳು ಪತ್ತೆಯಾಗಿವೆ. 62 ಅಬಕಾರಿ ಕಚೇರಿಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಕಾರ್ಯಾಚರಣೆ ನಡೆಸಲಾಗಿದೆ.
ಯಶವಂತಪುರ, ಬ್ಯಾಟರಾಯನಪುರ ಅಬಕಾರಿ ಕಚೇರಿಗೆ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಉಪ ಲೋಕಾಯುಕ್ತ ಬಿ. ವೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಹುತೇಕ ಕಚೇರಿಗಳಲ್ಲಿ ಅನೇಕ ಲೋಪದೋಷ ಕಂಡುಬಂದಿದೆ. ಯಾವುದೇ ಸೀಲ್ ಹಾಕಿರದ ಸುಮಾರು ಅರ್ಧ ಕೆಜಿ ಅನಧಿಕೃತ ಗಾಂಜಾ, ಮದ್ಯದ ಬಾಟಲಿ, ದಾಖಲೆ ಇಲ್ಲದ ಎರಡು ಲಕ್ಷ ನಗದು ಪತ್ತೆಯಾಗಿದ್ದು, ಈ ಬಗ್ಗೆ ಸಮರ್ಪಕ ಸ್ಪಷ್ಟನೆ ನೀಡುವಂತೆ ಲೋಕಾಯುಕ್ತರು ಸೂಚನೆ ನೀಡಿದ್ದಾರೆ. ಸೂಕ್ತ ಸ್ಪಷ್ಟನೆ ನೀಡದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಎನ್.ಡಿ.ಪಿ.ಎಸ್. ಪ್ರಕರಣದಲ್ಲಿ ಅಬಕಾರಿ ಇಲಾಖೆಯವರಿಗೆ ಗಾಂಜಾ ಜಪ್ತಿ ಮಾಡಲು ಅವಕಾಶವಿದೆ. ಜಪ್ತಿ ಮಾಡಿದ ಗಾಂಜಾವನ್ನು ಸೀಲ್ ಮಾಡಬೇಕು ಎನ್ನುವ ನಿಯಮಗಳಿವೆ. ಆದರೆ, ನಿಯಮ ಉಲ್ಲಂಘಿಸಿ ಮಾದಕ ವಸ್ತುಗಳನ್ನು ಪ್ರತ್ಯೇಕವಾಗಿ ಇಡಲಾಗಿತ್ತು ಎಂದು ಹೇಳಲಾಗಿದೆ.