ಕರ್ನಾಟಕ ಕಾಂಗ್ರೆಸ್ ನ ‘ಪೇಸಿಎಂ’(‘PayCM’) ಪೋಸ್ಟರ್ ಗಳಿಗೆ ತಮ್ಮ ಫೋಟೋವನ್ನು ಬಳಸಿದ್ದಾರೆ ಎಂದು ಬೆಂಗಳೂರು ಮೂಲದ ನಟ ಅಖಿಲ್ ಅಯ್ಯರ್ ತಿಳಿಸಿದ್ದಾರೆ. ಒಪ್ಪಿಗೆಯಿಲ್ಲದೆ ತಮ್ಮರ ಫೋಟೋ ಬಳಸಲಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರ ಚಿತ್ರವಿರುವ ‘ಪೇಸಿಎಂ’ ಪೋಸ್ಟರ್ ಗಳನ್ನು ಹಾಕಲಾಗಿದೆ. ಪ್ರಸ್ತುತ ಬಿಜೆಪಿ ಆಡಳಿತದಲ್ಲಿ ಶೇಕಡಾ 40 ರಷ್ಟು ಕಮಿಷನ್ ರೂಢಿಯಾಗಿದೆ ಎನ್ನುವುದನ್ನು ತೋರಿಸಲು “40% ಸರ್ಕಾರ” ಪೋಸ್ಟರ್ ಗಳನ್ನು ವಿನ್ಯಾಸಗೊಳಿಸಲಾಗಿದೆ.
ಒಂದು ಪೋಸ್ಟರ್‌ನಲ್ಲಿ ಅಖಿಲ್ ಅಯ್ಯರ್ ಅವರ ಫೋಟೋವನ್ನು ಬಳಸಲಾಗಿದೆ. 40% ಸರ್ಕಾರ 54,000 ಕ್ಕೂ ಹೆಚ್ಚು ಯುವಕರ ವೃತ್ತಿಜೀವನವನ್ನು ಕಸಿದುಕೊಂಡಿದೆ ಎಂದು ಪೋಸ್ಟರ್ ನಲ್ಲಿ ಆರೋಪಿಸಲಾಗಿದೆ.
ಟ್ವಿಟರ್ ನಲ್ಲಿ ನಟ ಅಖಿಲ್ ಅಯ್ಯರ್ ಅವರು ತಮ್ಮ ಚಿತ್ರದ “ಅಕ್ರಮ” ಬಳಕೆಯನ್ನು ಫ್ಲ್ಯಾಗ್ ಮಾಡಿದ್ದಾರೆ. ಮತ್ತು ನನ್ನ ಫೋಟೋವನ್ನು ಕಾನೂನುಬಾಹಿರವಾಗಿ ನನ್ನ ಒಪ್ಪಿಗೆಯಿಲ್ಲದೆ “40% ಸರ್ಕಾರ” ಎಂಬ ಕಾಂಗ್ರೆಸ್ ಪ್ರಚಾರಕ್ಕಾಗಿ ಬಳಸುತ್ತಿರುವುದನ್ನು ನೋಡಿ ನನಗೆ ದಿಗಿಲಾಗಿದೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಈ ಪೋಸ್ಟ್ ನಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರನ್ನು ಟ್ಯಾಗ್ ಮಾಡಿದ ಅವರು ಈ ವಿಷಯವನ್ನು ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.