ಚಲನಚಿತ್ರ ಗೀತೆಗಳು ಸೇರಿದಂತೆ ವಿವಿಧ ಪ್ರಕಾರದ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿರುವ, ಸ್ವರ ಮಾಂತ್ರಿಕ ಇಳಯರಾಜ ಅವರು ಮಾರ್ಚ್ 8ರಂದು ಲಂಡನ್ನಲ್ಲಿ ನಡೆಯುವ ‘ಸಿಂಫನಿ’ಯನ್ನು (ವಾದ್ಯಮೇಳ) ಮುನ್ನಡೆಸಲಿದ್ದಾರೆ.
ಲಂಡನ್ನ ಅಪೋಲೊ ಇವೆಂಟಿಮ್ ಸಭಾಂಗಣದಲ್ಲಿ ನಡೆಯುವ ಸ್ವರಸಮ್ಮೇಳನದಲ್ಲಿ, ಇಳಯರಾಜ ಅವರ ಚೊಚ್ಚಲ ಸ್ವರ ಸಂಯೋಜನೆ ‘ವ್ಯಾಲಿಯಂಟ್’ ಅನಾವರಣಗೊಳ್ಳಲಿದೆ.
ಪಾಶ್ಚಾತ್ಯ ಶಾಸ್ತ್ರೀಯ ವಾದ್ಯಮೇಳವನ್ನು ಬ್ರಿಟನ್ನಲ್ಲಿ ನಿರ್ವಹಿಸಿದ ಮೊದಲ ಭಾರತೀಯ ಕಲಾವಿದ ಎಂಬ ಗೌರವಕ್ಕೆ 81 ವರ್ಷದ ಇಳಯರಾಜ ಪಾತ್ರರಾಗಲಿದ್ದಾರೆ. ಈ ಮೂಲಕ, ಅವರು ಸಂಗೀತ ಕ್ಷೇತ್ರದಲ್ಲಿನ ಸುದೀರ್ಘ ಪಯಣದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
“ನಮ್ಮ ದೇಶ ಕುರಿತು ನಾವು ‘ನಂಬಲಾಗದ ಭಾರತ’ ಎಂದು ಹೇಳುತ್ತೇವೆ. ಅದೇ ರೀತಿ ನನ್ನ ಈ ಸಾಧನೆ ನೋಡಿದಾಗ ‘ನಂಬಲಾಗದ ಇಳಯರಾಜ’ ಎಂದೇ ಹೇಳಬೇಕಿದೆ” ಎಂದು ಇಳಯರಾಜ ಪ್ರತಿಕ್ರಿಯಿಸಿದ್ದಾರೆ.
ಲಂಡನ್ಗೆ ತೆರಳಲು ಗುರುವಾರ ಚೆನ್ನೈನಲ್ಲಿ ವಿಮಾನವೇರುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಲಂಡನ್ನಲ್ಲಿ ನಡೆಯಲಿರುವ ನನ್ನ ಕಾರ್ಯಕ್ರಮ ಸಂಗೀತ ಪ್ರಿಯರಿಗೆ ರಸದೌತಣ ನೀಡಲಿದೆ ಎಂಬ ವಿಶ್ವಾಸ ಹೊಂದಿದ್ದೇನೆ” ಎಂದು ಹೇಳಿದರು. ಕೇವಲ 35 ದಿನಗಳಲ್ಲಿ ಇಳಯರಾಜ ಅವರು ಈ ಸ್ವರ ಸಂಯೋಜನೆ ಮಾಡಿದ್ದು ವಿಶೇಷ.