ನವದೆಹಲಿ: ಮಧುಮೇಹ ನಿಯಂತ್ರಿಸಲು ಮಾಲಿಕ್ಯೂಲ್ ಚಿಕಿತ್ಸೆಯನ್ನು ಹಿಮಾಚಲ ಪ್ರದೇಶದ ಮಂಡಿ ಐಐಟಿ ಸಂಶೋಧಕರು ಕಂಡುಹಿಡಿದಿದ್ದಾರೆ.
ರಾಸಾಯನಿಕ ಧಾತು(ಮಾಲಿಕ್ಯೂಲ್) ಅನ್ನು ಪಿಕೆ2 ಎಂದು ಕರೆಯಲಾಗಿದೆ. ಬಾಯಿಯಿಂದ ಸೇವಿಸುವ ಔಷಧ ಇದಾಗಿದ್ದು, ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಬಿಡುಗಡೆ ಮಾಡುವುದನ್ನು ಪ್ರಚೋದಿಸುತ್ತದೆ. ಮಾಲಿಕ್ಯೂಲ್ ಚಿಕಿತ್ಸೆಯಿಂದ ದೇಹದ ಸಕ್ಕರೆ ಪ್ರಮಾಣ ಸಮತೋಲನ ಸಾಧ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಬಯಾಲಾಜಿಕಲ್ ಕೆಮಿಸ್ಟ್ರಿ ಜರ್ನಲ್ ನಲ್ಲಿ ಸಂಶೋಧಕರ ವರದಿ ಪ್ರಕಟಿಸಲಾಗಿದೆ. ಮಧುಮೇಹ ನಿಯಂತ್ರಣಕ್ಕೆ ಈಗ ಚುಚ್ಚುಮದ್ದು ರೂಪದಲ್ಲಿ ಎಕ್ಸೆನಾಟೈಡ್, ಲಿರಾಗ್ಲುಡ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಇದು ದುಬಾರಿ ಜೊತೆಗೆ ಅಸ್ಥಿರವಾಗಿದೆ. ಮಧುಮೇಹ ನಿಯಂತ್ರಣಕ್ಕೆ ಸರಳ ಮತ್ತು ಪರಿಣಾಮಕಾರಿಯಾದ ಹಾಗೂ ಕಡಿಮೆ ದರದ ಮಾಲಿಕ್ಯೂಲ್ ಚಿಕಿತ್ಸೆ ಆವಿಷ್ಕರಿಸುವ ಮಂಡಿ ಐಐಟಿ ಸಂಶೋಧಕರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ.
ಮಂಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯ ಸಂಶೋಧಕರು ಮಧುಮೇಹಕ್ಕೆ ಚಿಕಿತ್ಸೆ ನೀಡಲು ಬಳಸಬಹುದಾದ ಔಷಧ ಗುರುತಿಸಿದ್ದಾರೆ. ಸ್ಕೂಲ್ ಆಫ್ ಬೇಸಿಕ್ ಸೈನ್ಸಸ್ ನ ಅಸೋಸಿಯೇಟ್ ಪ್ರೊಫೆಸರ್ ಡಾ. ಪ್ರೊಸೆನ್ ಜಿತ್ ಮೊಂಡಲ್ ಮಾತನಾಡಿ, ಮಧುಮೇಹಕ್ಕೆ ಬಳಸಲಾಗುವ ಎಕ್ಸೆನಾಟೈಡ್ ಮತ್ತು ಲಿರಾಗ್ಲುಟೈಡ್‌ನಂತಹ ಪ್ರಸ್ತುತ ಔಷಧಗಳನ್ನು ಚುಚ್ಚುಮದ್ದುಗಳಾಗಿ ನೀಡಲಾಗುತ್ತದೆ. ಅವು ದುಬಾರಿ ಮತ್ತು ಅಸ್ಥಿರವಾಗಿವೆ. ನಾವು ಸ್ಥಿರವಾಗಿರುವ ಸರಳವಾದ ಔಷಧಿಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದ್ದು, ಇದು ಅಗ್ಗದ ಮತ್ತು ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದಾರೆ.