ಐಐಟಿ-ಮಂಡಿಯ ಹೊಸ ನಿರ್ದೇಶಕರಾದ ಪ್ರೊಫೆಸರ್ ಲಕ್ಷ್ಮೀಧರ್ ಬೆಹೆರಾ ದೆವ್ವಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸ್ನೇಹಿತರೊಬ್ಬರ ಮನೆಯಿಂದ ಮಂತ್ರಗಳ ಪಠಣೆ ಮಾಡುವ ಮೂಲಕ ಇಂಥ ದೆವ್ವಗಳನ್ನು ಹೋಗಲಾಡಿಸಿದ ಕುರಿತು ಬೆಹೆರಾ ಮಾತನಾಡಿರುವ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ.
ಐದು ನಿಮಿಷಗಳ ಈ ವಿಡಿಯೋದಲ್ಲಿ, 1993ರಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಾತನಾಡಿದ್ದು, ಚೆನ್ನೈನಲ್ಲಿರುವ ತಮ್ಮ ಸ್ನೇಹಿತರೊಬ್ಬರ ಮನೆಯಲ್ಲಿ ದೆವ್ವಗಳಿಂದ ಪೀಡಿತವಾಗಿದ್ದಾಗಿ ತಿಳಿಸಿದ್ದಾರೆ.
“ಭಗವದ್ಗೀತೆಯಲ್ಲಿರುವ ಸಂದೇಶವನ್ನು ಅರಿಯಲು ಆರಂಭಿಸಿದ್ದ ತಾವು ’ಹರೇ ರಾಮ ಹರೇ ಕೃಷ್ಣ’ ಮಂತ್ರ ಪಠಣವನ್ನೂ ಆರಂಭಿಸಿದ್ದಾಗಿ ತಿಳಿಸಿರುವ ಬೆಹೆರಾ, ‘ಪವಿತ್ರ ಹೆಸರಿನ ಬಲ ಏನೆಂಬ ಡೆಮೋ’ವನ್ನು ತಮ್ಮ ಸ್ನೇಹಿತರಿಗೆ ಪರಚಯಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
“ನನ್ನಿಬ್ಬರು ಸ್ನೇಹಿತರೊಂದಿಗೆ ಆ ಜಾಗವನ್ನು ಸಂಜೆ 7 ಗಂಟೆಗೆ ತಲುಪಿದೆ. ಸಂಶೋಧಕರ ಅಪಾರ್ಟ್ಮೆಂಟ್ನಲ್ಲಿ ಆತ ವಾಸವಿದ್ದರು. 10-15 ನಿಮಿಷಗಳ ಜೋರಾದ ಪಠಣದ ನಂತರ, ಬಹಳ ಕುಳ್ಳಗಿದ್ದ ಆತನ ತಂದೆಯನ್ನು ದಿಢೀರನೆ ಕಂಡೆವು…. ಬಹಳ ವಯಸ್ಸಾದ, ನಡೆಯಲು ಕಷ್ಟಪಡುವ ವ್ಯಕ್ತಿ….ಇದ್ದಕ್ಕಿದ್ದಂತೆಯೇ ಆತನ ಕೈಗಳು ಮತ್ತು ಕಾಲುಗಳು….. ಆತ ಭೂತಕುಣಿತ ಮಾಡಲು ಆರಂಭಿಸಿದ್ದು, ಆತನ ತಲೆ ಬಹುತೇಕ ಛಾವಣಿ ಮುಟ್ಟಲು ಆರಂಭಿಸಿತ್ತು. ಆತನ ಮೈಮೇಲೆ ಭೂತ ಬಂದಿದೆ ಎಂದು ನಿಮಗೆ ನೋಡಿದರೆ ಅರ್ಥವಾಗುವಂತಿತ್ತು,” ಎಂದು ವಿಡಿಯೋದಲ್ಲಿ ಬೆಹೆರಾ ವಿವರಿಸಿದ್ದಾರೆ.
ಇದಾದ ಬಳಿಕ ತಮ್ಮ ಸ್ನೇಹಿತನ ತಾಯಿ ಮತ್ತು ಮಡದಿಯ ಮೇಲೂ ಭೂತ ಬಂದಿತ್ತು ಎನ್ನುವ ಬೆಹೆರಾ, 45 ನಿಮಿಷಗಳ ಕಾಲ ಜೋರು ದನಿಯಲ್ಲಿ ಮಂತ್ರ ಪಠಣದ ಮೂಲಕ ಆ ದೆವ್ವಗಳಲ್ಲಿ ಓಡಿಸಲಾಯಿತು ಎನ್ನುತ್ತಾರೆ.
’ಲರ್ನ್ ಗೀತಾ ಲಿವ್ ಗೀತಾ’ ಎಂಬ ಹೆಸರಿನಲ್ಲಿ ಯೂಟ್ಯೂಬ್ನಲ್ಲಿರುವ ಚಾನೆಲ್ ಒಂದರಲ್ಲಿ ಈ ವಿಡಿಯೋವನ್ನು ಬಿತ್ತರಿಸಲಾಗಿತ್ತು. ’ಗೀತೆ ಇಷ್ಟಪಡುವ ಐಐಟಿಯನ್ನರ ಪ್ರಾಜೆಕ್ಟ್’ ಎಂದು ಈ ಚಾನೆಲ್ಗೆ ಟ್ಯಾಗ್ಲೈನ್ ಕೊಡಲಾಗಿದೆ.
ಐಐಟಿ ದೆಹಲಿಯಲ್ಲಿ ಪಿಎಚ್ಡಿ ಮಾಡಿರುವ ಬೆಹೆರಾ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಆಗಿದ್ದಾರೆ. ರೋಬಾಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಬೆಹೆರಾ ಪಿಚ್ಡಿ ಮಾಡಿದ್ದಾರೆ.