ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ –IIT, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ –NIT ಗಳ ಬಿಟೆಕ್ ಪದವಿ ಪ್ರವೇಶಕ್ಕೆ ಒಂದೇ ಹಂತದ ಪರೀಕ್ಷೆ ನಡೆಸಲು ಐಐಟಿ ನಿರ್ವಹಣಾ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಪ್ರತಿಷ್ಠಿತ ತಾಂತ್ರಿಕ ಕಾಲೇಜುಗಳಿಗೆ ಒಂದೇ ಪ್ರವೇಶ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಒಂದೇ ವಿಷಯದ ಪತ್ರಿಕೆಗಳನ್ನು ಹಲವು ಬಾರಿ ಬರೆಯಬೇಕಾದ ಅನಿವಾರ್ಯತೆ ಇದ್ದು, ಇದನ್ನು ಬದಲಿಸಲು ಕಳೆದ ಏಪ್ರಿಲ್ ನಲ್ಲಿ ಭುವನೇಶ್ವರ ಐಐಟಿಯಲ್ಲಿ ನಡೆದ ಐಐಟಿಗಳ ನಿರ್ವಹಣಾ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಇನ್ನಷ್ಟು ಚರ್ಚೆ ಸಮಾಲೋಚನೆ ನಡೆಸಿ ನಿಯಮ ರೂಪಿಸಲು ತೀರ್ಮಾನಿಸಲಾಗಿದೆ.
ಪ್ರತಿ ಸಂಸ್ಥೆಯ ಪ್ರವೇಶ ಮಾನದಂಡ ಪ್ರತ್ಯೇಕವಾಗಿರುವುದರಿಂದ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. 23 ಐಐಟಿ, 31 ಎನ್ಐಟಿ, 26 ಐಐಐಟಿಗಳಿದ್ದು, 14 ಲಕ್ಷ ಇಂಜಿನಿಯರಿಂಗ್ ಸೀಟುಗಳು ಲಭ್ಯವಿವೆ. ತಾಂತ್ರಿಕ ಕೋರ್ಸುಗಳ ಪ್ರವೇಶಕ್ಕೆ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪರೀಕ್ಷೆಗಳೊಂದಿಗೆ ಸರ್ಕಾರಗಳು ನಡೆಸುವ ಪರೀಕ್ಷೆಗಳನ್ನು ಕೂಡ ಬರೆಯಬೇಕಿದೆ.
ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆಗಳ ಜೊತೆಗೆ ಕೇಂದ್ರೀಯ ವಿವಿಗಳಲ್ಲಿ ಪದವಿ ಕೋರ್ಸ್ ಗಳಿಗೆ ನಡೆಸುವ ವಿಜ್ಞಾನದ ಇದೇ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಬೇಕಿದೆ. ಹೀಗಾಗಿ ಇಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕೂ ಇದೇ ಪರೀಕ್ಷೆಯ ವಿಜ್ಞಾನದ ವಿಷಯಗಳನ್ನು ಪರಿಗಣಿಸಬಹುದೆಂಬ ಚರ್ಚೆ ನಡೆದಿದ್ದು, ಪ್ರವೇಶಕ್ಕೆ ಒಂದೇ ಪರೀಕ್ಷೆ ನಡೆಸುವ ಚಿಂತನೆ ಇದೆ.