ಟಚ್- ಸೆನ್ಸಿಟಿವ್ (ಹ್ಯಾಪ್ಟಿಕ್) ಸ್ಮಾರ್ಟ್ ವಾಚ್ ಅನ್ನು ಐಐಟಿ ಕಾನ್ಪುರದ ಸಂಶೋಧಕರ ತಂಡ ಅಭಿವೃದ್ಧಿಪಡಿಸಿದೆ. ಇದು ದೃಷ್ಟಿ ಸಮಸ್ಯೆ ಇರುವವರ ದೈನಂದಿನ ಜೀವನದಲ್ಲಿ ಸಹಾಯ ಮಾಡಲು ವಿವಿಧ ವೈಶಿಷ್ಟ್ಯತೆ ಹೊಂದಿದೆ.
ಇದು ಆರೋಗ್ಯ ಪ್ಯಾರಾ ಮೀಟರ್ ಇಂಡಿಕೇಷನ್, ಇನ್ಸ್ಟಂಟ್ ಶಾರ್ಟ್- ಟೈಮರ್, ಹೈಡ್ರೇಷನ್ ರಿಮೈಂಡರ್ ಮುಂತಾದ ಹಲವಾರು ವೈಶಿಷ್ಟ್ಯತೆ ನೀಡುತ್ತದೆ.
ನ್ಯಾಷನಲ್ ಸೆಂಟರ್ ಫಾರ್ ಫ್ಲೆಕ್ಸಿಬಲ್ ಎಲೆಕ್ಟ್ರಾನಿಕ್ಸ್‌ನ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಸಿದ್ಧಾರ್ಥ ಪಾಂಡಾ ಮತ್ತು ವಿಶ್ವರಾಜ್ ಶ್ರೀವಾಸ್ತವ ಈ ವಾಚ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಜಗತ್ತಿನಲ್ಲಿ ಸುಮಾರು 49 ಮಿಲಿಯನ್ ಅಂಧರು ಮತ್ತು 285 ಮಿಲಿಯನ್ ದೃಷ್ಟಿಹೀನ ವ್ಯಕ್ತಿಗಳಿದ್ದು, ಭಾರತದಲ್ಲಿ ಶೇ.20 ರಷ್ಟಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ಸುಲಭವಾಗಿ ಸಂವಹನ ನಡೆಸಲು ಕಷ್ಟಪಡುತ್ತಾರೆ.
ಇವರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು, ಐಐಟಿ ಕಾನ್ಪುರದ ತಂಡವು ಹ್ಯಾಪ್ಟಿಕ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್ ವಾಚ್ ಅಭಿವೃದ್ಧಿಪಡಿಸಿದೆ.
ಟಚ್ ಸೆನ್ಸಿಟಿವ್, ವೈಬ್ರೇಷನ್ ಆಧಾರಿತ ವೈಶಿಷ್ಟ್ಯಗಳು ಅಂಧರು ಮತ್ತು ದೃಷ್ಟಿಹೀನರಿಗೆ ಸಮಯದ ಅರಿವು ಮಾಡಿಸುತ್ತದೆ. ಇದರ ವೆಚ್ಚ ಕೂಡ ಹೆಚ್ಚಾಗುವುದಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಡಿಯೋ ಆಧಾರಿತ ಔಟ್‌ಪುಟ್ ಸಾಧನಗಳಿಗೆ ಹೋಲಿಸಿದರೆ ಇದು ಖಾಸಗಿ ಬಳಕೆಗೆ ಹೆಚ್ಚು ಸೂಕ್ತವಾಗಿದೆ.
ಹೃದಯ ಬಡಿತದಂತಹ ಆರೋಗ್ಯ ಇಂಡಿಕೇಟರ್ ತಿಳಿಸಲು ಕೂಡ ಈ ವಾಚ್ ಸಹಕಾರಿ.