ಗುವಾಹಟಿ: ಉತ್ತರ ಗುವಾಹಟಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT) ವಿದ್ಯಾರ್ಥಿಯೊಬ್ಬ ಕಾಲೇಜು ಸಂಗಾತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ.
ಆರೋಪಿ ವಿದ್ಯಾರ್ಥಿಯನ್ನು ಕಾಮರೂಪ್ ಜಿಲ್ಲೆಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮಾರ್ಚ್ 29 ರಂದು ಹೋಳಿ ಆಚರಣೆಯ ಸಂದರ್ಭದಲ್ಲಿ ಗರ್ಲ್ಸ್ ಹಾಸ್ಟೆಲ್ ಸಮೀಪ ವಿದ್ಯಾರ್ಥಿನಿಗೆ ಪಾನೀಯ ಕುಡಿಸಿದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಗುಜರಾತಿ ನಿವಾಸಿಯಾಗಿರುವ ಸಂತ್ರಸ್ತೆ ದೂರು ನೀಡಿದ್ದಾಳೆ.
ಪಾನೀಯ ಸೇವಿಸಿದ ನಂತರ ಪ್ರಜ್ಞೆ ತಪ್ಪಿದ ಬಳಿಕ ಆತ ಲೈಂಗಿಕ ಕಿರುಕುಳ ನೀಡಿದ್ದಾನೆ. ಕಾಲೇಜಿನ ಅಧಿಕಾರಿಗಳು ಆಕೆಯನ್ನು ಗುವಾಹಟಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ವಿದ್ಯಾರ್ಥಿನಿ ದೂರು ಆಧರಿಸಿ ಶನಿವಾರ ಆರೋಪಿಯನ್ನು ಬಂಧಿಸಿದ್ದು, ಅಂಮಿಗಾಂವ್ ನ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎದುರು ಹಾಜರು ಪಡಿಸಲಾಗಿದೆ. ಆರೋಪಿತ ವಿದ್ಯಾರ್ಥಿಯನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ. ಕಾಲೇಜಿನ ಸತ್ಯಶೋಧನಾ ಸಮಿತಿ ವರದಿ ಸಲ್ಲಿಸಿದ್ದ ನಂತರ ಸಂಸ್ಥೆಯಿಂದ ಪೊಲೀಸರಿಗೆ ದೂರು ನೀಡಲಾಗಿದೆ.