ಖರಗ್‌ಪುರ: ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಖರಗ್‌ಪುರ ಪದವೀಧರರಾಗಿರುವ ಅಂಕಿತ್ ಜೋಶಿ ಅವರು ತಮ್ಮ ನವಜಾತ ಮಗಳೊಂದಿಗೆ ಹೆಚ್ಚು ಸಮಯ ಕಳೆಯಲು ಹೆಚ್ಚಿನ ಸಂಬಳ ಪಡೆಯುವ ಕೆಲಸವನ್ನು ತೊರೆದಿದ್ದು, ಇವರ ವಿಷಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದು ವಾರದ ಪಿತೃತ್ವ ರಜೆ ಸಿಗುತ್ತಿತ್ತು. ಆದರೆ ಮಗಳೊಂದಿಗೆ ಕಳೆಯಲು ಇಷ್ಟು ಸಮಯ ಸಾಕಾಗುತ್ತಿರಲಿಲ್ಲ. ಆದ್ದರಿಂದ ಮಗಳು ಹುಟ್ಟುವ ಕೆಲವು ದಿನಗಳ ಮೊದಲು, ನಾನು ನನ್ನ ಹೆಚ್ಚಿನ ಸಂಬಳದ ಕೆಲಸವನ್ನು ತ್ಯಜಿಸಿದೆ. ಇದು ವಿಚಿತ್ರ ನಿರ್ಧಾರ ಎಂದು ನನಗೆ ತಿಳಿದಿದೆ. ಇದಕ್ಕೆ ಕೆಲವರು ವಿರೋಧ ಕೂಡ ವ್ಯಕ್ತಪಡಿಸಿದರು. ಕೆಲಸ ಇಲ್ಲದಿದ್ದರೆ ಎಷ್ಟು ಕಷ್ಟ ಆಗುತ್ತೆ ಗೊತ್ತಾ ಎಂದು ಕೇಳಿದ್ದರು. ಆದರೆ ನನ್ನ ಪತ್ನಿ ಆಕಾಂಕ್ಷಾ ನನ್ನ ಜೊತೆ ನಿಂತಿದ್ದಳು. ಇದರಿಂದಾಗಿ ಇವೆಲ್ಲವೂ ಸಾಧ್ಯವಾಯಿತು ಎನ್ನುತ್ತಾರೆ ಅಂಕಿತ್.
“ಕಳೆದ ತಿಂಗಳು ನಾವು ಸುಂದರವಾದ ಹೆಣ್ಣು ಮಗುವಿಗೆ ಪೋಷಕರಾದಾಗ ನಮ್ಮ ಕನಸು ನನಸಾಯಿತು. ನಮ್ಮ ಹೃದಯಗಳು ತುಂಬಿದ್ದವು ಮತ್ತು ನಮ್ಮ ಜೀವನವು ಸಂಪೂರ್ಣವಾಯಿತು. ಆದರೆ ನನ್ನ ಮಗಳು ಜಗತ್ತಿಗೆ ಬರುವ ಮುಂಚೆಯೇ, ನನ್ನ ವಾರದ ಪಿತೃತ್ವ ರಜೆಗಿಂತ ಹೆಚ್ಚಿನ ಸಮಯವನ್ನು ಅವಳೊಂದಿಗೆ ಕಳೆಯಲು ನಾನು ಬಯಸುತ್ತೇನೆ ಎಂದು ನನಗೆ ತಿಳಿದಿತ್ತು ಎಂದು ಅವರು ಹೇಳಿದರು. ಅಂದಹಾಗೆ ಇವರ ಪತ್ನಿ ಕೂಡ ಉತ್ತಮ ಕೆಲಸದಲ್ಲಿದ್ದಾರೆ.