ತನ್ನ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅನಾಮಧೇಯ ವ್ಯಕ್ತಿಯೊಬ್ಬರು ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಒಂದಾದ ಬಾಂಬೆ ಐಐಟಿಗೆ ಬರೋಬ್ಬರಿ 160 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಚೆಕ್ ಮೂಲಕ ಈ ಭಾರಿ ಮೊತ್ತವನ್ನು ನೀಡಿರುವ ಅವರು, ತಮ್ಮ ಹೆಸರನ್ನು ಬಹಿರಂಗಗೊಳಿಸದಂತೆ ಬಾಂಬೆ ಐಐಟಿ ಆಡಳಿತ ವರ್ಗಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತಂತೆ ಮಾತನಾಡಿರುವ ಐಐಟಿಬಿ ನಿರ್ದೇಶಕ ಸುಭಾಷ್ ಚೌಧರಿ, ಖಾಸಗಿ ವ್ಯಕ್ತಿಯೊಬ್ಬರು ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಹಣವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಅದರಲ್ಲೂ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ, ಜೊತೆಗೆ ಹಸಿರು ವಲಯ ನಿರ್ಮಾಣಕ್ಕೆ ಪ್ರಾಶಸ್ತ್ಯ ನೀಡುವುದಾಗಿ ಮಾಹಿತಿ ನೀಡಿದ್ದಾರೆ.
ಬಾಂಬೆ ಐಐಟಿಯಲ್ಲಿ ವ್ಯಾಸಂಗ ಮಾಡಿ ಈಗ ಉನ್ನತ ಹುದ್ದೆಯಲ್ಲಿರುವ ಹಳೆ ವಿದ್ಯಾರ್ಥಿ ಇಷ್ಟು ಮೊತ್ತವನ್ನು ದೇಣಿಗೆಯಾಗಿ ನೀಡಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಕಾರಣಕ್ಕೆ ಹಲವು ವೆಚ್ಚಗಳ ಮೇಲೆ ಕಡಿವಾಣಕ್ಕೆ ಮುಂದಾಗಿದ್ದ ಬಾಂಬೆ ಐಐಟಿಗೆ ಈಗ ಲಭಿಸಿರುವ ಮೊತ್ತದಿಂದ ಒಂದಷ್ಟು ರಿಲೀಫ್ ಸಿಕ್ಕಂತಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಈಗ ದೇಣಿಗೆಯಾಗಿ ಬಂದಿರುವ ಹಣವನ್ನು ಉಪಯುಕ್ತ ಕಾರ್ಯಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.