ನವದೆಹಲಿ: ಕೇಂದ್ರದಿಂದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿ ಬಿಡುಗಡೆ ಮಾಡಿದ್ದು, ರಾಜ್ಯದ ನಾಲ್ಕು ಶಿಕ್ಷಣ ಸಂಸ್ಥೆಗಳಿಗೆ ಉನ್ನತ ಸ್ಥಾನ ಲಭಿಸಿದೆ.
ಬೆಂಗಳೂರಿನ ಐ.ಐ.ಎಸ್.ಸಿ. ನಂಬರ್ ಒನ್ ಆಗಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ರ್ಯಾಂಕಿಂಗ್ ನಲ್ಲಿ ಸತತ ಎರಡನೇ ವರ್ಷ ಬೆಂಗಳೂರಿನ ಐಐಎಸ್‌ಸಿ ಅತ್ಯುತ್ತಮ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೆಂಗಳೂರು ಐಐಎಂ ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕೂಡ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಅತ್ಯುತ್ತಮ ಡೆಂಟಲ್ ಕಾಲೇಜುಗಳ ಪಟ್ಟಿಯಲ್ಲಿ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಎರಡನೇ ಸ್ಥಾನದಲ್ಲಿದೆ.
ಕೇಂದ್ರ ಶಿಕ್ಷಣ ಸಚಿವಾಲಯ ನ್ಯಾಷನಲ್ ಇನ್ಸ್ಟಿಟ್ಯೂಟ್ ರಾಂಕಿಂಗ್ ಫ್ಲೆಮ್ ವರ್ಕ್ ಇತ್ತೀಚೆಗೆ ಸಮೀಕ್ಷಾ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳ ಪೈಕಿ ಮದ್ರಾಸ್ ಐಐಟಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ.
ಐದನೇ ಸ್ಥಾನವನ್ನು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಪಡೆದುಕೊಂಡಿದೆ. ಬೋಧನೆ, ಕಲಿಕೆ, ಸಂಪನ್ಮೂಲ, ಸಂಶೋಧನೆ, ವೃತ್ತಿಪರ ಚಟುವಟಿಕೆ, ಶೈಕ್ಷಣಿಕ ಫಲಿತಾಂಶ, ವ್ಯಾಪ್ತಿ ಹಾಗೂ ಒಳಗೊಳ್ಳುವಿಕೆ ಮಾನದಂಡದ ಅಡಿ ರ್ಯಾಂಕಿಂಗ್ ನೀಡಲಾಗುತ್ತದೆ.