
ಚಿರತೆಗಳು ಹಾಗೂ ಹುಲಿಗಳು ವೇಗ ಮತ್ತು ರಹಸ್ಯ ಚಲನೆಗಳಿಗೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ನೆಲದ ಮೇಲೆ ಇರುವಾಗ, ಕಪ್ಪು ಚಿರತೆ ವೇಗಕ್ಕೆ ಹೆಸರುವಾಸಿ.
ಅದೇ ಮರದ ಮೇಲೇರಿದಾಗ ಅವುಗಳು ನಿಧಾನವಾಗಿ ಕೆಳಕ್ಕೆ ಬರುವ ದೃಶ್ಯವನ್ನು ನೋಡುವುದು ಮಾತ್ರ ಕಣ್ಣಿಗೆ ಇಂಪು. ಮರದ ಮೇಲಿನಿಂದ ಸರಸರ ಕೆಳಕ್ಕೆ ಇಳಿದರೂ ನೆಲದ ಸಮೀಪ ಬಂದಾಗ ಸರಿಯಾಗಿ ಇಳಿಯುವ ಸಂಬಂಧ ಅವುಗಳು ಜಿಗಿಯುವ ರೀತಿ ಕುತೂಹಲಕಾರಿಯಾಗಿದೆ.
ಈ ಕುರಿತ ವಿಡಿಯೋ ಒಂದನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ್ ನಂದಾ ಶೇರ್ ಮಾಡಿದ್ದಾರೆ. ಪ್ರಾಣಿ ಮತ್ತು ಪಕ್ಷಿ ಪ್ರಪಂಚದ ಹಲವು ವಿಡಿಯೋಗಳನ್ನು ಆಗಾಗ್ಗೆ ಶೇರ್ ಮಾಡುವ ಸುಶಾಂತ್ ನಂದಾ ಅವರು ಈಗ ಕಪ್ಪು ಚಿರತೆಯೊಂದು ಮರದ ಮೇಲಿನಿಂದ ನೆಲಕ್ಕೆ ಇಳಿಯುವಾಗ ಅನುಸರಿಸುವ ಕ್ರಮಗಳ ಕುರಿತ ಕುತೂಹಲದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಮಧ್ಯಪ್ರದೇಶದ ಪೆಂಚ್ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿ ಸಫಾರಿಗಾಗಿ ಹೊರಟಿದ್ದ ಪ್ರವಾಸಿಗರು ಇದರ ವಿಡಿಯೋ ಮಾಡಿರುವುದಾಗಿ ಅವರು ಹೇಳಿದ್ದಾರೆ.
ಚಿರತೆಗಳು ತಮ್ಮ ಅತಿವೇಗದ ಸಾಮರ್ಥ್ಯಗಳ ಜೊತೆಗೆ, ಹೀಗೆ ಲ್ಯಾಂಡಿಂಗ್ ಮಾಡುವಲ್ಲಿ ಪ್ರಸಿದ್ಧಿಯಾಗಿದೆ. ಮಾತ್ರವಲ್ಲದೇ ಈ ಚಿರತೆಯು ಅಪರೂಪದ ಬಣ್ಣವಾಗಿದ್ದು ಪ್ರವಾಸಿಗರಿಗೆ ಸ್ಮರಣೀಯ ಸಫಾರಿ ಅನುಭವ ನೀಡುತ್ತದೆ ಎಂದಿದ್ದಾರೆ.