ನೀವೇನಾದ್ರೂ ಅರ್ಜೆಂಟ್ನಲ್ಲಿ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟಕ್ಕೆ ಅಡುಗೆ ಯೋಚ್ನೇ ಮಾಡ್ತಿದ್ರೆ ಹೀರೆಕಾಯಿ, ಗುಳ್ಳಬದನೇ ಬಜ್ಜಿ ಗೊಜ್ಜು ಟ್ರೈ ಮಾಡಿ. ಬಹಳ ವಿಶೇಷವಾದ ಈ ರೆಸಿಪಿ ಅನ್ನ, ಚಪಾತಿ, ದೋಸೆಗೆ ಬೆಸ್ಟ್ ಕಾಂಬಿನೇಷನ್.
ಮೊದಲಿಗೆ ಹೀರೆಕಾಯಿ ಸಿಪ್ಪೆ ತುರಿದು ಹೆಚ್ಚಿಟ್ಟುಕೊಳ್ಳಬೇಕು. ನಂತರ 2 ಗುಳ್ಳಬದನೇಕಾಯಿಯನ್ನು ಹೆಚ್ಚಿಟ್ಟುಕೊಳ್ಳಬೇಕು. ಈಗ ಕುಕ್ಕರ್ಗೆ ಒಂದು ಕಪ್ ತೊಗರಿ ಬೇಳೆ ಹಾಕಿಕೊಳ್ಳಬೇಕು. ಇದಕ್ಕೆ ಹೀರೆಕಾಯಿ, ಗುಳ್ಳಬದನೇಕಾಯಿ ಹಾಕಬೇಕು. ಬಳಿಕ 2 ಲೋಟ ನೀರು, ರುಚಿಗೆ ತಕ್ಕಷ್ಟು ಉಪ್ಪು, 3 ಹಸಿಮೆಣಸಿನಕಾಯಿ, ಸ್ವಲ್ಪ ಸಾಂಬರು ಪುಡಿ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು.
ನಂತರ ಇದಕ್ಕೆ ಹೆಚ್ಚಿಕೊಂಡಿರುವ 2 ಟೊಮ್ಯಾಟೊ, ಎರಡು ಈರುಳ್ಳಿ ಸೇರಿಸಿಕೊಳ್ಳಬೇಕು. ಬಳಿಕ ಒಂದು ನಿಂಬೆ ಗಾತ್ರದಷ್ಟು ಹುಣಸೇಹಣ್ಣನ್ನು ನೀರಿನಲ್ಲಿ ನೆನೆಸಿಟ್ಟು ಆ ರಸವನ್ನು ಸೇರಿಸಿಕೊಳ್ಳಬೇಕು. ಈಗ ಈ ಎಲ್ಲಾ ಮಿಶ್ರಣವನ್ನು ಕುಕ್ಕರ್ ಮುಚ್ಚಳ ಮುಚ್ಚಿ ಮೂರು ವಿಶಲ್ ಬರಿಸಿಕೊಳ್ಳಬೇಕು.
ಕುಕ್ಕರ್ ತಣ್ಣಗಾದ ಬಳಿಕ ಮುಚ್ಚಳ ತೆಗೆದು ಸ್ವಲ್ಪ ಕೈಯಾಡಬೇಕು. ಈಗ ಕುಕ್ಕರ್ನಲ್ಲಿರುವ ಸ್ವಲ್ಪ ಸಾರನ್ನು ಎತ್ತಿಟ್ಟುಕೊಂಡರೆ ಮಧ್ಯಾಹ್ನಕ್ಕೆ ಅನ್ನದ ಜೊತೆಗೆ ಸೇವಿಸಬಹುದು. ಉಳಿದ ಅರ್ಧ ಮಿಶ್ರಣವನ್ನು ಮಿಕ್ಸಿ ಜಾರಿಗೆ ಹಾಕಿ ಒಂದು ತಿರುವು ತಿರುವಿಕೊಳ್ಳಬೇಕು. ಬಳಿಕ ಹೀಗೆ ತಿರುವಿಕೊಂಡ ಮಿಶ್ರಣಕ್ಕೆ, ಸಾಸಿವೆ, ಕರಿಬೇವು ಮತ್ತು ಕೆಂಪುಮೆಣಸಿನಕಾಯಿ ಸೇರಿಸಿ ಒಗ್ಗರಣೆ ಕೊಡಬೇಕು. ಇಷ್ಟಾದರೆ ಹೀರೆಕಾಯಿ, ಗುಳ್ಳಬದನೇಕಾಯಿ ಬಜ್ಜಿ ಗೊಜ್ಜು ಚಪಾತಿ, ದೋಸೆ ಜೊತೆಗೆ ಸವಿಯಲು ಸಿದ್ಧ.
ನೀವು ವರ್ಕಿಂಗ್ ವುಮೆನ್ ಆಗಿದ್ದರೆ ಈ ರೀತಿಯ ಅಡುಗೆಗಳು ನಿಮಗೆ ಉಪಯುಕ್ತವಾಗಿರುತ್ತದೆ. ರುಚಿಯಾಗಿರುವುದಲ್ಲದೇ ಮತ್ತು ತ್ವರಿತವಾಗಿ ಸಿದ್ಧವಾಗುತ್ತದೆ.