ಇತ್ತೀಚಿನ ದಿನಗಳಲ್ಲಿ ಯಾವ ಕಾರ್ಯಕ್ರಮವಾದರೂ ಸರಿ, ಮಿಕ್ಕಿದ್ದೆಲ್ಲಾ ಏನೇ ಇಲ್ಲದೇ ಇದ್ದರೂ ಫೋಟೋ ಶೂಟ್ ಇರಲೇ ಬೇಕು ಎನ್ನುವ ಮನಃಸ್ಥಿತಿ ಜನರದ್ದು. ಮದುವೆ, ಹುಟ್ಟುಹಬ್ಬ, ಗೃಹ ಪ್ರವೇಶಗಳಲ್ಲದೇ, ಪ್ರೀವೆಡ್ಡಿಂಗ್, ಬಾಣಂತನದ ಫೋಟೋ ಶೂಟ್‌ಗಳೂ ಇತ್ತೀಚಿನ ದಿನಗಳಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ.
ಆದರೆ ಇಲ್ಲೊಬ್ಬಾಕೆ ’ಡೈವೋರ್ಸ್ ಫೋಟೋಶೂಟ್’ ಮಾಡುವ ಮೂಲಕ ತನ್ನ ವಿಚ್ಛೇದನವನ್ನು ಸಂಭ್ರಮಿಸುತ್ತಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫ್ಯಾಶನ್ ಡಿಸೈನರ್ ಶಾಲಿನಿ ತಮ್ಮ ವೈವಾಹಿಕ ಜೀವನ ಅಂತ್ಯಗೊಳಿಸಿ ಮತ್ತೊಮ್ಮೆ ಸಿಂಗಲ್ ಆದ ಕ್ಷಣವನ್ನು ಈ ವಿಶಿಷ್ಟ ಫೋಟೋಶೂಟ್ ಮೂಲಕ ಆಚರಿಸಿದ್ದಾರೆ.
“ದನಿ ಇಲ್ಲದವರಿಗೆ ವಿಚ್ಛೇದನ ಪಡೆದ ಮಹಿಳೆಯ ಸಂದೇಶ. ಕೆಟ್ಟ ವೈವಾಹಿಕ ಸಂಬಂಧವೊಂದನ್ನು ಬಿಟ್ಟು ಬಿಡುವುದು ಓಕೆ ಏಕೆಂದರೆ ನಿಮಗೆ ನಿಮ್ಮ ಜೀವನಗಳ ಮೇಲೆ ನಿಯಂತ್ರಣ ಪಡೆದುಕೊಂಡು, ಸಂತಸದಿಂದ ಇರಲು ಹಾಗೂ ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಅಗತ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ವಿಚ್ಛೇದನ ಎಂಬುದು ವೈಫಲ್ಯವಲ್ಲ!!! ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ನಿಮಗೆ ಅದು ಒಂದು ಹೊಸ ತಿರುವು. ವೈವಾಹಿಕ ಸಂಬಂಧ ತ್ಯಜಿಸಿ ಏಕಾಂಗಿಯಾಗಿ ನಿಲ್ಲಲು ಬಹಳ ಧೈರ್ಯ ಬೇಕು. ಹಾಗಾಗಿ, ಎಲ್ಲಾ ಧೈರ್ಯಶಾಲಿ ಮಹಿಳೆಯರಿಗೆ ನಾನು ಇದನ್ನು ಅರ್ಪಿಸುತ್ತಿದ್ದೇನೆ,” ಎಂದು ಸಂದೇಶವನ್ನು ಹಾಕಿ ತಮ್ಮ ಫೋಟೋಶೂಟ್ ಮಾಡಿದ್ದಾರೆ ಶಾಲಿನಿ.
ಶಾಲಿನಿಯ ಈ ನಿಲುವಿಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿ, ಆಕೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ಆದರೆ ಕೆಲವರು ಟೀಕೆ ಮಾಡಿದ್ದಾರೆ.
“ದಯವಿಟ್ಟು ಇಂಥ ಟ್ರೆಂಡ್ ಸೃಷ್ಟಿಸಬೇಡಿ. ಬಹಳ ಮಂದಿ ವಿಚ್ಛೇದನ ಪಡೆದು ಫೋಟೋಶೂಟ್ ಮಾಡುತ್ತಾರೆ, ಇದು ಸಮಾಜಕ್ಕೆ ಒಳ್ಳೆಯದಲ್ಲ ಹಾಗಾಗಿ ಡೈವೋರ್ಸ್ ಫೋಟೋಶೂಟ್‌ನ ಚಿತ್ರಗಳನ್ನು ಡಿಲೀಟ್ ಮಾಡಿ,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
“ಏನಾಗುತ್ತಿದೆ ನಮ್ಮ ಸಮಾಜದಲ್ಲಿ ಎಂದು ದೇವರಿಗೇ ಗೊತ್ತು. ಕೇವಲ ಕೆಲವು ಲೈಕ್ ಹಾಗೂ ಕಾಮೆಂಟ್‌ಗಳಿಗಾಗಿ ಈಕೆ ಪಾಶ್ಚಾತ್ಯ ಮಹಿಳೆಯೊಬ್ಬರನ್ನು ಕಾಪಿ ಮಾಡಿದ್ದಾಳೆ. ದೇಶದಲ್ಲಿ ಪವಿತ್ರವೆಂದು ಪರಿಗಣಿಸಲಾದ ವೈವಾಹಿಕ ಸಂಬಂಧದ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಈಕೆ ಮಾಡುತ್ತಿದ್ದಾಳೆ,” ಎಂದು ಮತ್ತೊಬ್ಬರು ಕಾಮೆಂಟ್ ಹಾಕಿದ್ದಾರೆ.
ಕೆಲ ದಿನಗಳ ಹಿಂದೆ, ಅಮೆರಿಕದ ಮಹಿಳೆಯೊಬ್ಬರು ಹತ್ತು ವರ್ಷದ ತಮ್ಮ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿ ಇಂಥದ್ದೇ ಫೋಟೋಶೂಟ್ ಮಾಡಿದ್ದರು. ಇದೇ ರೀತಿ ಮತ್ತೊಬ್ಬ ಮಹಿಳೆ ತಮ್ಮ ವಿಚ್ಛೇದನದ ನಾಲ್ಕನೇ ವರ್ಷಾಚರಣೆಯ ಚಿತ್ರಗಳನ್ನು ಲಿಂಕ್ಡಿನ್ ಹಾಗೂ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು.