ಕೂದಲಿನಿಂದ ಉದುರಿ ಅಸಹ್ಯ ಹುಟ್ಟಿಸುವ ತಲೆ ಹೊಟ್ಟು ಮಹಿಳೆಯರನ್ನು ಕಾಡುವ ಬಹುದೊಡ್ಡ ಸಮಸ್ಯೆ. ಇದು ಒಂದು ರೀತಿಯಲ್ಲಿ ಕೀಳರಿಮೆಯನ್ನು ಹುಟ್ಟು ಹಾಕುತ್ತದೆ. ಎಷ್ಟೇ ಬಾರಿ ತಲೆ ತೊಳೆದುಕೊಂಡರೂ ಒಮ್ಮೊಮ್ಮೆ ಈ ಸಮಸ್ಯೆ ಬೆಂಬಿಡೋದೆ ಇಲ್ಲ. ಆದರೆ ಒಂದಷ್ಟು ಉಪಾಯಗಳಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
ತಲೆ ಸ್ನಾನ ಮಾಡುವಾಗ ಸೀಗೆಪುಡಿ ಮತ್ತು ನಿಂಬೆರಸವನ್ನು ಮಿಶ್ರಣ ಮಾಡಿ ತಲೆಗೆ ಸರಿಯಾಗಿ ಹಚ್ಚಿ ತೊಳೆದುಕೊಳ್ಳೋದರಿಂದ ತಲೆ ಹೊಟ್ಟು ದೂರವಾಗುತ್ತದೆ. ಇದಲ್ಲದೇ ಅಡಿಗೆ ಉಪ್ಪನ್ನು ನೀರಿನಲ್ಲಿ ಕರಗಿಸಿ ಆ ದ್ರಾವಣದಲ್ಲಿ ತಲೆ ತೊಳೆದುಕೊಳ್ಳೋದರಿಂದ ಹೊಟ್ಟು ಏಳೋದು ನಿಲ್ಲುತ್ತದೆ.
ಮೊಟ್ಟೆಯ ಬಿಳಿಭಾಗವನ್ನು ತಲೆಗೆ ಹಚ್ಚಿ ಉಜ್ಜಿ, ನೀರಿನಿಂದ ತೊಳೆದುಕೊಳ್ಳೋದರಿಂದಲೂ ಹೊಟ್ಟು ಸಂಪೂರ್ಣವಾಗಿ ನಾಶವಾಗುತ್ತದೆ. ಮೆಂತ್ಯವನ್ನು ಮಜ್ಜಿಗೆಯಲ್ಲಿ ನೆನೆ ಹಾಕಿ ಒಂದು ಗಂಟೆಯ ನಂತರ ರುಬ್ಬಿ ತಲೆಗೆ ಹಚ್ಚಿಕೊಂಡು ಬಿಸಿ ನೀರಿನಲ್ಲಿ ತೊಳೆದುಕೊಳ್ಳೋದರಿಂದ ತಲೆಹೊಟ್ಟಿನಿಂದ ಮುಕ್ತಿ ಪಡೆಯಬಹುದು.