ಇದ್ದಕ್ಕಿದ್ದಂತೆ ಸೀನು ಮತ್ತು ಕೆಮ್ಮು ಬರುವುದು ಸರ್ವೇಸಾಮಾನ್ಯ. ಸೀನುವಿಕೆಯು ಕೇವಲ ದೈಹಿಕ ಪ್ರತಿಕ್ರಿಯೆ, ಮೂಗು ಅಥವಾ ಗಂಟಲಿನ ಕಿರಿಕಿರಿಯಿಂದ ಉಂಟಾಗುತ್ತದೆ. ಆದರೆ ನಾಲ್ಕು ಜನರ ಮಧ್ಯದಲ್ಲಿ ದಿಢೀರನೆ ಸೀನು ಬಂದರೆ ನಾವು ಅವರನ್ನು ಕ್ಷಮೆ ಕೇಳುತ್ತೇವೆ, ಅಷ್ಟೇ ಅಲ್ಲ ಗಾಡ್ ಬ್ಲೆಸ್ ಯೂ ಎಂದು ಹೇಳಿರುವುದನ್ನು ಸಹ ನೀವು ಕೇಳಿರಬಹುದು.
ಜನರು ಇದನ್ನು ಏಕೆ ಹೇಳುತ್ತಾರೆ ಮತ್ತು ಅದರ ಹಿಂದಿನ ಕಾರಣ ಏನು ಎಂಬುದು ಅನೇಕರಿಗೆ ತಿಳಿದಿಲ್ಲ. ಯುರೋಪ್ನಲ್ಲಿ ಮಧ್ಯಯುಗದಲ್ಲಿ ಪ್ಲೇಗ್‌ನಂತಹ ರೋಗಗಳು ಹರಡುತ್ತಿರುವ ಸಂದರ್ಭದಲ್ಲಿ ಸೀನುವಿಕೆಯನ್ನು ಅನಾರೋಗ್ಯದ ಲಕ್ಷಣವೆಂದು ಪರಿಗಣಿಸಲಾಗಿತ್ತು. ಆದ್ದರಿಂದ ಯಾರು ಸೀನುತ್ತಾರೋ ಅವರಿಗೆ ದೇವರ ಆಶೀರ್ವಾದ ಸಿಗಲಿ ಎಂದು ಜನರು ಪ್ರಾರ್ಥಿಸುತ್ತಿದ್ದರು.
ಸೀನುವುದು ದುರಾದೃಷ್ಟದ ಸಂಕೇತ ಎಂದು ಕೆಲವರು ನಂಬುತ್ತಾರೆ. ಅದಕ್ಕಾಗಿಯೇ ಗಾಡ್ ಬ್ಲೆಸ್ ಯೂ ಎಂದು ಹೇಳುವ ಮೂಲಕ ದುರದೃಷ್ಟವನ್ನು ನಿವಾರಿಸಲು ಪ್ರಯತ್ನಿಸುತ್ತಾರೆ. ಸೀನುವಿಕೆ ನಮ್ಮ ಹೃದಯ ಬಡಿತವನ್ನು ನಿಲ್ಲಿಸುತ್ತದೆ ಎಂಬ ನಂಬಿಕೆಯೂ ಇದೆ. ಅದಕ್ಕಾಗಿಯೇ ಹತ್ತಿರ ಕುಳಿತವರು “ದೇವರು ನಿಮ್ಮನ್ನು ಆಶೀರ್ವದಿಸಲಿ” ಎಂದು ಹೇಳುವ ಮೂಲಕ ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳಬೇಕೆಂದು ಹಾರೈಸುತ್ತಾರೆ.
ಇತ್ತೀಚಿನ ದಿನಗಳಲ್ಲಿ, “ಗಾಡ್ ಬ್ಲೆಸ್ ಯು” ಎಂದು ಹೇಳುವುದು ಹೆಚ್ಚಿನ ಸಾಮಾಜಿಕ ಶಿಷ್ಟಾಚಾರದ ಭಾಗವಾಗಿದೆ. ಅನಾರೋಗ್ಯ ಪೀಡಿತ ವ್ಯಕ್ತಿಗೆ ಶುಭ ಹಾರೈಕೆಗಳನ್ನು ವ್ಯಕ್ತಪಡಿಸುವ ಸಭ್ಯ ವಿಧಾನ ಇದು. ಪ್ರಾಚೀನ ಕಾಲದ ಕೆಲವು ನಂಬಿಕೆಗಳ ಪ್ರಕಾರ ಸೀನುವಾಗ ಆತ್ಮವು ದೇಹವನ್ನು ಬಿಡಬಹುದು ಎಂದು ಹೇಳಲಾಗುತ್ತಿತ್ತು. ಆದ್ದರಿಂದ “ಗಾಡ್ ಬ್ಲೆಸ್ ಯೂ” ಎಂದು ಹೇಳುವ ಮೂಲಕ ಜನರು ಆತ್ಮವನ್ನು ದೇಹಕ್ಕೆ ಹಿಂದಿರುಗಿಸಲಿ ಮತ್ತು ವ್ಯಕ್ತಿ ಆರೋಗ್ಯವಾಗಿರಲಿ ಎಂದು ಪ್ರಾರ್ಥಿಸುತ್ತಿದ್ದರು.