ನಿದ್ರೆ ಪ್ರತಿ ಮನುಷ್ಯನಿಗೆ ಅತ್ಯವಶ್ಯಕ. ನಿದ್ರಾವಸ್ಥೆಯಲ್ಲಿ ಕೂಡ ನಮ್ಮ ಮೆದುಳು ಕಾರ್ಯ ನಿರ್ವಹಿಸುತ್ತೆ. ಹಾಗಾಗಿ ಶರೀರಕ್ಕೆ ನಿದ್ರೆ ಬಹಳ ಮುಖ್ಯ. ನಿದ್ರೆ ಯಾವಾಗ ಮತ್ತು ಎಷ್ಟು ಹೊತ್ತು ಮಾಡುತ್ತೇವೆ ಎನ್ನುವುದು ಕೂಡ ಅಷ್ಟೇ ಅವಶ್ಯಕ.
ನಿದ್ದೆ ವ್ಯಕ್ತಿಯ ವಯಸ್ಸಿನ ಮೇಲೆ ಅವಲಂಬಿತವಾಗಿದೆ. ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ನಿದ್ದೆ ಬೇಕು. ನವಜಾತ ಶಿಶುಗಳಿಗೆ ದಿನಕ್ಕೆ 18 ಗಂಟೆ ನಿದ್ರೆಯ ಅಗತ್ಯವಿರುತ್ತದೆ. ಒಂದು ವರ್ಷದ ಮಗುವಿಗೆ 14 ತಾಸು ಸಾಕಾಗುತ್ತದೆ. ವಯಸ್ಕರಿಗೆ ಕನಿಷ್ಟ 5 ತಾಸು ನಿದ್ರೆ ಬೇಕೇಬೇಕು. ಬದಲಾದ ಜೀವನ ಶೈಲಿ ಜನರ ನಿದ್ರೆಯಲ್ಲೂ ಕಾಣ್ತಿದೆ. ಕೆಲಸದ ಒತ್ತಡದಲ್ಲಿ ಬಹುತೇಕರು ರಾತ್ರಿ 5 ಗಂಟೆ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಇದು ಅಪಾಯಕ್ಕೆ ಅಡಿಪಾಯವಾಗಬಹುದು.
5 ಗಂಟೆಗಳಿಗಿಂತಲೂ ಕಡಿಮೆ ನಿದ್ರೆ ಮಾಡುವುದರಿಂದ ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಅಪಾಯ ಹೆಚ್ಚಾಗುತ್ತದೆ. ಮುಂದೆ ಇದು ಹೃದಯ ಕಾಯಿಲೆಗೆ ಎಡೆಮಾಡಿಕೊಡಬಹುದು. ಕಾರ್ಯನಿರತ ವ್ಯಕ್ತಿಗಳಿಗೆ ನಿದ್ರೆ ಸಮಯವನ್ನು ನುಂಗಿ ಹಾಕುತ್ತದೆ ಎಂಬ ಭಾವನೆ ಬರುತ್ತದೆ. ಅಧ್ಯಯನದ ಪ್ರಕಾರ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದೆ ಹೋದಲ್ಲಿ ಹೃದಯ ಕಾಯಿಲೆ ಕಾಡುವುದು ನಿಶ್ಚಿತ.
ಕಡಿಮೆ ನಿದ್ರೆಯ ಕಾರಣದಿಂದ ಹೈ ಬೀಪಿ ಹಾಗೂ ಡಯಾಬಿಟೀಸ್ ಖಾಯಿಲೆ ಬರುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ ರಾತ್ರಿ 5 ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ರೆ ಮಾಡುವವರು ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯತೆ, ಕುಂಠಿತ ದೈಹಿಕ ಸಾಮರ್ಥ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆಂದು ಅಧ್ಯಯನದ ಮೂಲಕ ಧೃಢಪಟ್ಟಿದೆ. ನಿದ್ರೆಯ ಕೊರತೆಯಿಂದ ದೇಹದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಹಾಗಾಗಿ, ಸಾಕಷ್ಟು ಪ್ರಮಾಣದಲ್ಲಿ ನಿದ್ದೆ ಮಾಡುವುದರಿಂದ ನೀವು ಚೈತನ್ಯಶೀಲರಾಗಿ, ಅತ್ಯುತ್ಸಾಹದಿಂದಿರಲು ಸಾಧ್ಯವಾಗುತ್ತದೆ.