ಶಾಪಿಂಗ್ ಅನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಕೈತುಂಬಾ ಹಣವಿಟ್ಟುಕೊಂಡು ಮಾಲ್‌ಗಳಲ್ಲಿ ಖರ್ಚು ಮಾಡಲು ಯಾರೂ ಇಷ್ಟಪಡುವುದಿಲ್ಲ. ಕಡಿಮೆ ಹಣದಲ್ಲಿ ಮಿತವ್ಯಯದ ಶಾಪಿಂಗ್ ಮಾಡುವುದೇ ಸೂಕ್ತ. ಅನೇಕರು ಶಾಪಿಂಗ್ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದಾಗಿ ಅವರ ಜೇಬು ಪೂರ್ತಿ ಖಾಲಿಯಾಗುತ್ತದೆ, ತಿಂಗಳ ಬಜೆಟ್ ಸಂಪೂರ್ಣವಾಗಿ ಹಾಳಾಗುತ್ತದೆ. ಶಾಪಿಂಗ್ ಮಾಡುವಾಗ ಕೆಲವೊಂದು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಅವುಗಳನ್ನು ಅನುಸರಿಸಿದರೆ ಕಡಿಮೆ ಹಣದಲ್ಲಿ ಶಾಪಿಂಗ್ ಮಾಡಬಹುದು.
ತರಾತುರಿಯಲ್ಲಿ ಖರೀದಿಸಬೇಡಿ
ಬಿಡುವು ಮತ್ತು ತಾಳ್ಮೆಯಿಂದ ಶಾಪಿಂಗ್ ಮಾಡಿದರೆ, ಏನನ್ನು ಕೊಳ್ಳಬೇಕು, ಬೇಡವೆಂಬುದನ್ನು ಯೋಚಿಸಲು ಸಾಧ್ಯವಾಗುತ್ತದೆ. ಹೀಗೆ ಮಾಡುವುದರ ಹಿಂದಿನ ಉದ್ದೇಶವೇನೆಂದರೆ ಮನೆಯಲ್ಲಿ ಹೆಚ್ಚು ಅಗತ್ಯವಿಲ್ಲದ ವಸ್ತುಗಳನ್ನೆಲ್ಲ ಖರೀದಿಸುವುದನ್ನು ತಪ್ಪಿಸಬಹುದು.
ಪಟ್ಟಿ ಮಾಡಿಕೊಳ್ಳದೇ ಶಾಪಿಂಗ್ ಮಾಡಬೇಡಿ
ಶಾಪಿಂಗ್‌ಗಾಗಿ ಮನೆಯಿಂದ ಹೊರಡುವ ಮೊದಲು, ನಿಮ್ಮ ಬಳಿ ಸರಕುಗಳ ಪಟ್ಟಿ ಇದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಿಕೊಳ್ಳಿ. ಅದು ಬಹಳ ಮುಖ್ಯ, ಏಕೆಂದರೆ ನೀವು ಮಾರುಕಟ್ಟೆಗೆ ಹೋದಾಗ ಏನನ್ನು ಖರೀದಿಸಬೇಕು ಎಂಬುದನ್ನು ಯೋಚಿಸುವ ಅಗತ್ಯವಿರುವುದಿಲ್ಲ. ಹಣವೂ ಉಳಿತಾಯವಾಗುತ್ತದೆ. ಪಟ್ಟಿಯಲ್ಲಿ ಇಲ್ಲದ ಅನಗತ್ಯ, ಅನುಪಯುಕ್ತ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬಹುದು.
ಇಂಪಲ್ಸ್ ಖರೀದಿಯನ್ನು ತಪ್ಪಿಸಿ
ಇಂಪಲ್ಸ್ ಬೈಯಿಂಗ್ ಎಂದರೆ ನಿರ್ದಿಷ್ಟ ವಸ್ತುವನ್ನು ಖರೀದಿಸದೇ ಮಾರುಕಟ್ಟೆಯಲ್ಲಿ ನೋಡಿ ಇಷ್ಟವಾಗಿದ್ದನ್ನೆಲ್ಲ ಕೊಂಡುಕೊಳ್ಳುವುದು. ಈ ಅಭ್ಯಾಸವು ನಿಮ್ಮ ಮಾಸಿಕ ಬಜೆಟ್ ಅನ್ನು ಹಾಳು ಮಾಡುತ್ತದೆ. ಮಾಲ್‌ಗಳಲ್ಲಿ ಅಂತಹ ಕೆಲವು ವಸ್ತುಗಳನ್ನು ಆಕರ್ಷಕವಾಗಿ ಜೋಡಿಸಿಟ್ಟಿರುತ್ತಾರೆ. ಅದನ್ನು ನೋಡಿ ಗ್ರಾಹಕರು ಮರುಳಾಗುತ್ತಾರೆ. ಇಂಪಲ್ಸ್ ಖರೀದಿಯ ಬದಲು ಮೊದಲೇ ನಿರ್ಧರಿಸಿದ ವಸ್ತುಗಳನ್ನು ಮಾತ್ರ ಕೊಂಡುಕೊಳ್ಳುವುದು ಉತ್ತಮ.
ಶಾಪಿಂಗ್ ಮಾಡುವ ಮೊದಲು ಮನೆಯಲ್ಲಿ ಪರಿಶೀಲಿಸಿ
ನೀವು ರೇಷನ್ ಅಥವಾ ಬಟ್ಟೆಗಳನ್ನು ಖರೀದಿಸಲು ಹೊರಟಿದ್ದರೆ, ಶಾಪಿಂಗ್‌ಗೆ ಹೊರಡುವ ಮೊದಲು ಮನೆಯಲ್ಲೊಮ್ಮೆ ಪರೀಕ್ಷಿಸಿ. ಯಾವ್ಯಾವ ವಸ್ತುಗಳು ಇವೆ? ಯಾವುದು ಖಾಲಿಯಾಗಿದೆ? ಇನ್ಯಾವುದರ ಅಗತ್ಯವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ನೀವು ಮನೆಯಲ್ಲಿ ಈಗಾಗಲೇ ಇರುವ ವಸ್ತುಗಳನ್ನು ಮತ್ತೆ ಖರೀದಿಸಬಹುದು. ಇದರಿಂದ ಹಣ ವ್ಯರ್ಥವಾಗುತ್ತದೆ.