ಇದು ದುಬಾರಿ ದುನಿಯಾ. ಪೆಟ್ರೋಲ್-ಡಿಸೇಲ್ ಬೆಲೆ ಗಗನಕ್ಕೇರುತ್ತಿದೆ. ಡಿಸೇಲ್ ಬೆಲೆ ಏರಿಕೆಯಿಂದ ಇತರೇ ವಸ್ತುಗಳ ಬೆಲೆಯಲ್ಲಿ ಕೂಡ ಏರಿಕೆ ಕಂಡು ಬರ್ತಿದೆ. ದಿನನಿತ್ಯದ ವಸ್ತುಗಳಾದ ತರಕಾರಿ, ಬೇಳೆ, ಸಕ್ಕರೆ ಸೇರಿದಂತೆ ಅನೇಕ ವಸ್ತುಗಳು ದುಬಾರಿಯಾಗುತ್ತವೆ.
ಕೊರೊನಾದಿಂದಾಗಿ ಈಗಾಗಲೇ ಸಂಕಷ್ಟದಲ್ಲಿರುವವರಿಗೆ ಒಂದೇ ಸಮನೆ ಏರುತ್ತಿರುವ ಬೆಲೆ ಮತ್ತಷ್ಟು ಕಂಗಾಲಾಗಿಸಿದೆ. ಇಂಥ ಸಮಯದಲ್ಲಿ ಕೆಲವೊಂದು ಸಣ್ಣ-ಸಣ್ಣ ಟಿಪ್ಸ್ ಅನುಸರಿಸಿ ನೀರಿನಂತೆ ಖಾಲಿಯಾಗುವ ಹಣವನ್ನು ಉಳಿತಾಯ ಮಾಡಬಹುದು.
ಮಾರುಕಟ್ಟೆಗೆ ಹೋಗುವ ಮುನ್ನ ಸಾಮಾನಿನ ಪಟ್ಟಿ ತಯಾರಿಸಿಕೊಳ್ಳಲು ಮರೆಯದಿರಿ. ಮನೆಯಲ್ಲಿ ಯಾವ ವಸ್ತುವಿಲ್ಲ ಎಂಬುದನ್ನು ಮೊದಲು ಪಟ್ಟಿ ಮಾಡಿಕೊಳ್ಳಿ. ಮಾರುಕಟ್ಟೆಗೆ ಹೋದಾಗ ಮನೆಯಲ್ಲಿರದ ವಸ್ತುಗಳನ್ನು ಮಾತ್ರ ಖರೀದಿ ಮಾಡಿ. ಅನವಶ್ಯಕ ವಸ್ತುಗಳನ್ನು ಖರೀದಿ ಮಾಡಿ ಹಣ ಖರ್ಚು ಮಾಡಬೇಡಿ.
ಡಿಜಿಟಲ್ ಜಗತ್ತಿನಲ್ಲಿ ಎಲ್ಲರ ಬಳಿಯೂ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಮೂಲಿ. ಬಹುತೇಕರು ಡೆಬಿಟ್ ಕಾರ್ಡ್ ಉಜ್ಜುತ್ತಾರೆ. ಈ ಕಾರ್ಡ್ ನಲ್ಲಿ ಹಣ ಪಾವತಿ ಸುಲಭ. ಆದ್ರೆ ಹಣ ಎಷ್ಟು ಖರ್ಚಾಯ್ತು ಎಂಬುದು ತಿಳಿಯೋದಿಲ್ಲ. ಕಾರ್ಡಿದೆ ಎನ್ನುತ್ತಲೇ ವಸ್ತುಗಳನ್ನು ಖರೀದಿ ಮಾಡ್ತೇವೆ. ಅದೇ ನಗದು ವ್ಯವಹಾರ ನಡೆಸಿದ್ರೆ ಶಾಪಿಂಗ್ ನಲ್ಲಿ ನಿಯಂತ್ರಣ ತರಬಹುದು. ಕೈನಲ್ಲಿರುವ ಹಣ ನೋಡಿ ಖರೀದಿ ಮಾಡೋದ್ರಿಂದ ಅನವಶ್ಯಕ ಖರ್ಚು ತಪ್ಪುತ್ತದೆ.
ಬ್ರಾಂಡ್ ಹುಚ್ಚು ಬಿಟ್ಟುಬಿಡುವುದು ಬೆಸ್ಟ್. ಜಾಹೀರಾತಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಬ್ರಾಂಡ್ ಕಂಪನಿಗಳು ಗ್ರಾಹಕರ ಜೇಬಿನಿಂದ ಹಣ ವಸೂಲಿ ಮಾಡುತ್ತವೆ. ಅದೇ ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುವ ಬ್ರಾಂಡ್ ಇಲ್ಲದ ಕಂಪನಿಗಳ ಬೆಲೆ ಕಡಿಮೆಯಿರುತ್ತದೆ. ಕ್ವಾಲಿಟಿ ಕೂಡ ಹೇಳಿಕೊಳ್ಳುವಷ್ಟು ಕೆಟ್ಟದಾಗಿರುವುದಿಲ್ಲ.
ಆಲೋಚನೆ ಮಾಡಿ ಖರ್ಚು ಮಾಡುವವರಿಗೆ ಸೇಲ್ ಸಮಯ ಒಳ್ಳೆಯದು. ಕೆಲ ಕಂಪನಿಗಳು ಆಗಾಗ ಕಡಿಮೆ ದರಕ್ಕೆ ಹೆಚ್ಚಿನ ವಸ್ತುಗಳನ್ನು ನೀಡುತ್ತದೆ. ಅಂಥ ಸಮಯದಲ್ಲಿಯೇ ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವುದ್ರಿಂದ ಹಣವನ್ನು ಉಳಿಸಬಹುದು.