ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಹೊಸ ಸರ್ಕಾರದ ನೇತೃತ್ವದಲ್ಲಿ ವಿಧನಮಂಡಲ ಅಧಿವೇಶನ ಮುಗಿದು, ಸರ್ಕಾರ ನೂರು ದಿನ ಪೂರೈಸಿದ್ದೂ ಆಯಿತು. ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದರೂ ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ…. ಬಿಜೆಪಿ ಈಗ ನಾವಿಕನಿಲ್ಲದ ಹಡಗಿನಂತಾಗಿದೆ ಎಂದು ಸ್ವಪಕ್ಷದ ನಾಯಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೂ ವಿಪಕ್ಷ ನಾಯಕನ ಆಯ್ಕೆ ವಿಚಾರ ವಿಳಂಬವಾಗುತ್ತಲೇ ಇದೆ. ಬಿಜೆಪಿಯ ಈ ಧೋರಣೆ ಕಂಡು ಚಿತ್ರರಂಗದ ಗಣ್ಯರೂ ಕೂಡ ಚಾಟಿ ಬೀಸುತ್ತಿದ್ದಾರೆ.
ಚುನಾವಣೆ ಮುಗಿದು, ಹೊಸ ಸರ್ಕಾರ ಅಧಿಕಾರಕ್ಕೆ ಬಂದು, ಅಧಿವೇಶನವೂ ಮುಗಿದು ಇಷ್ಟು ದಿನವಾದರೂ ಬಿಜೆಪಿಗೆ ಓರ್ವ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗದ ಸ್ಥಿತಿಯಲ್ಲಿರುವುದು ಜನಸಾಮಾನ್ಯರು ಮಾತ್ರವಲ್ಲ, ಸಿನಿ ರಂಗದವರೂ ಟೀಕಿಸುವ ಪರಿಸ್ಥಿತಿ. ಬಿಜೆಪಿಯ ಸ್ಥಿತಿ ಕಂಡು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಕಾಂಗ್ರೆಸ್ ನವರನ್ನೇ ಒಬ್ಬರನ್ನು ವಿಪಕ್ಷನಾಯಕನನ್ನಾಗಿ ಔಟ್ ಸೋರ್ಸ್ ಮಾಡಿ ಎಂದು ಸಲಹೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಗೆ ಮನವಿಯೊಂದನ್ನು ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್, ವಿಪಕ್ಷನಾಯಕನಿಲ್ಲದೆ ವಿಧಾನಸಭೆ ಅಪೂರ್ಣ ಎನಿಸುತ್ತಿದೆ. ನಿಮಗೆ ಆಯ್ಕೆ ತೀರಾ ಕಷ್ಟವಾದಲ್ಲಿ ಕಾಂಗ್ರೆಸ್ ನಲ್ಲೇ ಸೂಕ್ತವಾದ ಒಬ್ಬರನ್ನು ಹುಡುಕಿ ವಿಪಕ್ಷ ನಾಯಕನ ಹುದ್ದೆಯನ್ನು ‘ಔಟ್ ಸೋರ್ಸ್ ’ ಮಾಡಿ ಎಂದು ಸಲಹೆ ನೀಡಿದ್ದಾರೆ.