ತೂಕ ಇಳಿಸಿಕೊಳ್ಳಲು ಯಾರಿಗೆ ಇಷ್ಟವಿಲ್ಲ ಹೇಳಿ? ಆದ್ರೆ ನಮ್ಮ ಆಹಾರ ಪದ್ಧತಿಯಲ್ಲಿ ತೂಕ ಇಳಿಸಿಕೊಳ್ಳೋದು ಅಸಾಧ್ಯದ ಮಾತಾಗಿಬಿಟ್ಟಿದೆ. ಕೆಲವರು ಹಠ ತೊಟ್ಟು ಉಪವಾಸ ಅಥವಾ ವ್ಯಾಯಾಮ ಮಾಡುತ್ತಾರೆ. ಆದರೂ ಪರಿಣಾಮ ಗೋಚರಿಸುವುದಿಲ್ಲ.
ತೂಕ ಕಡಿಮೆಯಾಗುತ್ತಿಲ್ಲ ಎಂದು ನೀವು ಭಯಪಡುವ ಅಗತ್ಯವಿಲ್ಲ. ನಿಮ್ಮ ಆಹಾರದಲ್ಲಿ ಕೆಲವೊಂದು ಡ್ರೈಫ್ರೂಟ್‌ಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಇವು ತೂಕ ಇಳಿಸಲು ಸಹಾಯ ಮಾಡುತ್ತವೆ.
ವಾಲ್‌ನಟ್: ಇದು ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇದರಲ್ಲಿ ಕೊಬ್ಬಿನಾಮ್ಲಗಳು, ಒಮೆಗಾ 3, ಉತ್ತಮ ಕೊಬ್ಬು, ಆಲ್ಫಾ ಲಿನೋಲೆನಿಕ್ ಆಮ್ಲ ಮುಂತಾದ ಅನೇಕ ಪೌಷ್ಟಿಕಾಂಶಗಳಿವೆ. ಇದರಲ್ಲಿರುವ ಆಲ್ಫಾ ಲಿನೋಲೆನಿಕ್ ಆಮ್ಲವು ಕೊಬ್ಬನ್ನು ಕರಗಿಸುವ ಕೆಲಸ ಮಾಡುತ್ತದೆ. ಆದ್ದರಿಂದ ನೀವು ತೂಕವನ್ನು ಇಳಿಸಲು ಬಯಸುತ್ತಿದ್ದರೆ ವಾಲ್‌ನಟ್ ಸೇವಿಸಿ. ವಾಲ್‌ನಟ್ ಅನ್ನು ನೆನೆಸಿ ಸಹ ತಿನ್ನಬಹುದು.
ಖರ್ಜೂರ: ಖರ್ಜೂರ ತುಂಬಾ ಪೌಷ್ಟಿಕವಾದ ಡ್ರೈ ಫ್ರೂಟ್. ಇದರಲ್ಲಿ ಉತ್ತಮ ಪ್ರಮಾಣದ ಖನಿಜಗಳು ಮತ್ತು ಜೀವಸತ್ವಗಳಿವೆ. ಇದರಲ್ಲಿ ಕಂಡುಬರುವ ನೈಸರ್ಗಿಕ ಸಿಹಿ ದೇಹಕ್ಕೆ ಹಾನಿ ಮಾಡುವುದಿಲ್ಲ. ಖರ್ಜೂರ ತಿಂದರೆ ಬಹಳ ಹೊತ್ತಿನವರೆಗೆ ಹಸಿವಾಗುವುದಿಲ್ಲ. ಜೊತೆಗೆ ಇದರಲ್ಲಿರೋ ವಿಟಮಿನ್ ನಮ್ಮ ತ್ರಾಣವನ್ನು ಹೆಚ್ಚಿಸುತ್ತದೆ.
ಬಾದಾಮಿ: ಪ್ರತಿದಿನ ಬಾದಾಮಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ನಿಮಗೆಲ್ಲ ಗೊತ್ತೇ ಇದೆ. ಬಾದಾಮಿಯಲ್ಲಿ ಬಹಳ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಕಂಡುಬರುತ್ತವೆ. ಉತ್ಕರ್ಷಣ ನಿರೋಧಕಗಳು, ಪ್ರೋಟೀನ್‌ಗಳು, ಮೊನೊಸ್ಯಾಚುರೇಟೆಡ್ ಕೊಬ್ಬುಗಳು ಮುಂತಾದ ಅನೇಕ ಪೌಷ್ಟಿಕಾಂಶಗಳು ಸಹ ಇವೆ. ಇದು ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸುತ್ತದೆ. ಹಾಗಾಗಿ ನೀವು ಪ್ರತಿದಿನ ಬಾದಾಮಿ ಸೇವಿಸಬಹುದು.
ಅಂಜೂರ: ಉತ್ತಮ ಆರೋಗ್ಯಕ್ಕಾಗಿ ಅಂಜೂರ ಸೇವನೆ ಮಾಡಬೇಕು. ಇದು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಕಂಡುಬರುವ ಫಿಸಿನ್ ಎಂಬ ಕಿಣ್ವವು ಜೀರ್ಣಕ್ರಿಯೆಯನ್ನು ಸರಿಯಾಗಿ ಇರಿಸುತ್ತದೆ. ಜೊತೆಗೆ ಆಹಾರ ತಿನ್ನಬೇಕೆಂಬ ಹಂಬಲವನ್ನು ನಿಯಂತ್ರಿಸುತ್ತದೆ. ಅಂಜೂರದ ಸಿಹಿ ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ. ದೇಹದ ತೂಕ ನಿಯಂತ್ರಣದಲ್ಲಿರುತ್ತದೆ.