ಬಾದಾಮಿ ಅತ್ಯಂತ ಜನಪ್ರಿಯ ಡ್ರೈಫ್ರೂಟ್‌ಗಳಲ್ಲೊಂದು. ಉತ್ಕರ್ಷಣ ನಿರೋಧಕಗಳು, ವಿಟಮಿನ್ ಇ, ಪ್ರೋಟೀನ್ ಮತ್ತು ಫೈಬರ್‌ನಿಂದ ಸಮೃದ್ಧವಾಗಿರುವ ಬಾದಾಮಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಬಾದಾಮಿ ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲು ಬೆಳೆಯುತ್ತದೆ ಎಂಬ ಸಂಗತಿ ಅನೇಕರಲ್ಲಿ ಆತಂಕ ಮೂಡಿಸಿದೆ. ಇದು ಎಷ್ಟು ಸತ್ಯ ಎಂಬುದನ್ನು ವಿಜ್ಞಾನಿಗಳೇ ಬಹಿರಂಗಪಡಿಸಿದ್ದಾರೆ.
ಬಾದಾಮಿ ಸೇವನೆಯಿಂದ ರಕ್ತದೊತ್ತಡ ಮತ್ತು ಹೃದ್ರೋಗದ ಹೊರತಾಗಿ ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡಬಹುದು. ಇದು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಆದರೆ ಅನೇಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಲೆಂದು ಬಹಳಷ್ಟು ಬಾದಾಮಿ ತಿನ್ನುತ್ತಾರೆ. ಬಾದಾಮಿಯನ್ನು ಅತಿಯಾಗಿ ತಿನ್ನುವುದು ಅಪಾಯಕಾರಿ. ತಜ್ಞರ ಪ್ರಕಾರ ಬಾದಾಮಿಯನ್ನು ಮಿತಿಮೀರಿ ತಿಂದರೆ ಕಿಡ್ನಿಯಲ್ಲಿ ಕಲ್ಲು ಬೆಳೆಯುವ ಸಾಧ್ಯತೆ ಇರುತ್ತದೆ.
ಸಾಮಾನ್ಯವಾಗಿ ಸಣ್ಣ ಪ್ರಮಾಣದ ಕಲ್ಲುಗಳು ಮೂತ್ರದೊಂದಿಗೆ ಹೊರಹೋಗುತ್ತವೆ. ಆದರೆ ಅವುಗಳ ಗಾತ್ರ ದೊಡ್ಡದಾದಂತೆ ನೋವು ಪ್ರಾರಂಭವಾಗುತ್ತದೆ. ಬಾದಾಮಿಯಲ್ಲಿ ಆಕ್ಸಲೇಟ್ ಸಮೃದ್ಧವಾಗಿದೆ, ಇದು ಕ್ಯಾಲ್ಸಿಯಂನೊಂದಿಗೆ ಬೆರೆತು ಕಿಡ್ನಿಯಲ್ಲಿ ಕಲ್ಲುಗಳು ರೂಪುಗೊಳ್ಳುತ್ತವೆ. ದೇಹವು ಇತರ ಆಹಾರ ಮೂಲಗಳಿಗಿಂತ ಹೆಚ್ಚಾಗಿ ನಟ್ಸ್‌ಗಳಿಂದ ಆಕ್ಸಲೇಟ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ.
ಹೆಚ್ಚು ಬಾದಾಮಿ ತಿನ್ನುವುದರಿಂದ ಆಕ್ಸಲೇಟ್ ಹೆಚ್ಚಾಗಿ ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆಗೆ ಕಾರಣವಾಗಬಹುದು. ವಿಶೇಷವಾಗಿ ಹೈಪರ್ ಆಕ್ಸಾಲೂರಿಯಾದಿಂದ ಬಳಲುತ್ತಿರುವವರಲ್ಲಿ ಬಹಳಷ್ಟು ಆಕ್ಸಲೇಟ್‌ಗಳಿರುತ್ತವೆ. ತಜ್ಞರ ಪ್ರಕಾರ ವಯಸ್ಕರು ಪ್ರತಿದಿನ ಗರಿಷ್ಠ 20-23 ಬಾದಾಮಿ ತಿನ್ನಬಹುದು. ಇದಕ್ಕಿಂದ ಜಾಸ್ತಿ ತಿನ್ನುವಂತಿಲ್ಲ. ಕಿಡ್ನಿ ಸಮಸ್ಯೆ ಇರುವವರು ಅಥವಾ ಈಗಾಗ್ಲೇ ಕಿಡ್ನಿ ಸ್ಟೋನ್‌ನಿಂದ ಬಳಲುತ್ತಿರುವವರು ಬಾದಾಮಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
ಬಾದಾಮಿಯನ್ನು ಮಿತವಾಗಿ ಸೇವಿಸುವುದರ ಜೊತೆಗೆ ಆಕ್ಸಲೇಟ್ ಕಡಿಮೆ ಇರುವ ಬಾಳೆಹಣ್ಣು, ಬ್ಲ್ಯಾಕ್‌ಬೆರಿ, ಬ್ಲೂಬೆರ್ರಿ, ಚೆರ್ರಿ, ಸ್ಟ್ರಾಬೆರಿ, ಸೇಬು, ಏಪ್ರಿಕಾಟ್, ನಿಂಬೆ, ಪೀಚ್‌ಗಳಂತಹ ಹಣ್ಣುಗಳನ್ನು ತಿನ್ನಬೇಕು. ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟರೆ ಆಕ್ಸಲೇಟ್ ಪ್ರಮಾಣ ಕಡಿಮೆಯಾಗುತ್ತದೆ. ಇದಲ್ಲದೆ ಬಾದಾಮಿ ಹಾಲಿನಲ್ಲಿ ಕಡಿಮೆ ಪ್ರಮಾಣದ ಆಕ್ಸಲೇಟ್ ಇರುತ್ತದೆ. ಇದಲ್ಲದೆ ಪ್ರತಿದಿನ ಕನಿಷ್ಠ 2.5 ಲೀಟರ್ ನೀರು ಕುಡಿಯಬೇಕು ಮತ್ತು ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಆಕ್ಸಲೇಟ್ ಅಪಾಯವನ್ನು ಕಡಿಮೆ ಮಾಡಬಹುದು.