ನೆಲ್ಲಿಕಾಯಿಯ ಪ್ರಯೋಜನಗಳ ಬಗ್ಗೆ ಬಹುತೇಕರಿಗೆ ತಿಳಿದಿದೆ. ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ನೆಲ್ಲಿಕಾಯಿಯನ್ನ ಸೂಪರ್ ಫುಡ್ ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ ನೆಲ್ಲಿಕಾಯಿಯ ಜ್ಯೂಸ್, ಚಟ್ನಿ, ಉಪ್ಪಿನಕಾಯಿ ಮತ್ತು ಮುರಬ್ಬ ಮಾಡಿ ತಿನ್ನುತ್ತೇವೆ. ಆದರೆ ಪ್ರತಿದಿನ ಬೆಳಗ್ಗೆ ನೆಲ್ಲಿಕಾಯಿ ನೀರು ಕುಡಿದರೆ ಇನ್ನೂ ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ.
ನೆಲ್ಲಿಕಾಯಿಯಲ್ಲಿ ಪ್ರೋಟೀನ್, ಕಾರ್ಬ್ಸ್, ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಸಕ್ಕರೆ ಅಂಶ ಅತ್ಯಲ್ಪವಾಗಿದೆ. ಹಾಗಾಗಿ ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ. ನೆಲ್ಲಿಕಾಯಿ ನೀರನ್ನು ತಯಾರಿಸುವುದು ಕೂಡ ಸುಲಭ.
ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ತೆಗೆದುಕೊಂಡು ಅದನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ. ಚೆನ್ನಾಗಿ ಕಲಕಿ ಮಿಕ್ಸ್ ಮಾಡಿಕೊಂಡು ಅದನ್ನು ಸೋಸಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ತೂಕ ಇಳಿಕೆ: ನೆಲ್ಲಿಕಾಯಿಯಲ್ಲಿ ಅಮೈನೋ ಆಮ್ಲ ಹೇರಳವಾಗಿ ಕಂಡು ಬರುತ್ತದೆ. ಅದರಿಂದಾಗಿ ದೇಹದ ಚಯಾಪಚಯ ಕ್ರಿಯೆ ಉತ್ತಮವಾಗಿರುತ್ತದೆ. ಪರಿಣಾಮ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬು ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಮಧುಮೇಹಕ್ಕೆ ಮದ್ದು: ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಬೆಳಗ್ಗೆ ನೆಲ್ಲಿಕಾಯಿ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
ಚರ್ಮ ಮತ್ತು ಕೂದಲ ಆರೋಗ್ಯ: ನೆಲ್ಲಿಕಾಯಿಯನ್ನು ಅನೇಕ ರೀತಿಯ ಸೌಂದರ್ಯವರ್ಧಕಗಳಲ್ಲಿ ಬಳಸುತ್ತಾರೆ. ಇದು ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ನಿಮಗೆ ಮೊಡವೆ ಅಥವಾ ಸುಕ್ಕುಗಳ ಸಮಸ್ಯೆ ಇದ್ದರೆ ನೆಲ್ಲಿಕಾಯಿ ನೀರನ್ನು ಕುಡಿಯಿರಿ. ದಟ್ಟನೆಯ ಹೊಳೆಯುವ ಕೂದಲಿಗಾಗಿ ನೆಲ್ಲಿಕಾಯಿಯನ್ನು ನೀವು ಬಳಸಬೇಕು.