ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಬಡ, ಮಧ್ಯಮ ವರ್ಗದವರು ಜೀವನ ನಡೆಸುವುದೇ ಕಷ್ಟ ಸಾಧ್ಯ. ದಿನವಿಡಿ ದುಡಿದರೂ, ಅಲ್ಪಸ್ವಲ್ಪ ಹಣ ಕೂಡಿಡಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಪೆಟ್ರೋಲ್ -ಡಿಸೇಲ್ ಬೆಲೆ ಏರಿಕೆ ಪರಿಣಾಮ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಜೊತೆಗೆ ಗ್ಯಾಸ್ ಸಿಲಿಂಡರ್ ಬೆಲೆಯೂ ಮುಗಿಲು ಮುಟ್ಟಿದೆ.
ತಿಂಗಳ ಕೊನೆಯಲ್ಲಿ ಇನ್ನೊಬ್ಬರ ಬಳಿ ಕೈಚಾಚಬೇಕಾಗುತ್ತದೆ. ಇದರಿಂದ ಹೊರಬರಲು ನಿಮ್ಮಲ್ಲಿಯೇ ಮಾರ್ಗವಿದೆ. ಕೂಡಿಟ್ಟ ಹಣ ಮುಂದೆ ಉಪಯೋಗಕ್ಕೆ ಬರುತ್ತದೆ ಎಂಬ ಮಾತಿದೆ. ಅಂತೆಯೇ ನೀವು ದುಡಿದ ಹಣದಲ್ಲಿ ಸ್ವಲ್ಪವನ್ನು ಉಳಿಸಿ. ದುಡಿಮೆಯ ಎಲ್ಲ ಹಣವನ್ನೂ ನೀರಿನಂತೆ ಖರ್ಚು ಮಾಡದೆ, ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ಸ್ವಲ್ಪ ಸ್ವಲ್ಪವೇ ಹಣ ಕೂಡಿಡಿ.
ಕೂಡಿಟ್ಟ ಹಣವನ್ನು ಪೋಸ್ಟ್ ಆಫೀಸ್, ಬ್ಯಾಂಕ್ ಗಳ ಉಳಿತಾಯ ಖಾತೆಗಳಲ್ಲಿ ತೊಡಗಿಸಿ. ಅದರಿಂದ ಬಡ್ಡಿ ಸಿಗುತ್ತದೆ. ಠೇವಣಿ ಅವಧಿ ಮುಗಿದ ಬಳಿಕ ಆ ಹಣದ ಜೊತೆಗೆ ನೀವು ಮತ್ತೆ ಕೂಡಿಟ್ಟ ಹಣವನ್ನು ಸೇರಿಸಿ ಅದನ್ನು ಮತ್ತೆ ಉಳಿತಾಯ ಖಾತೆಗಳಲ್ಲಿ ತೊಡಗಿಸಿ.
ಹಣ ಜಾಸ್ತಿಯಾಗುತ್ತೆ. ಬಡ್ಡಿ ಜಾಸ್ತಿ ಸಿಗುತ್ತೆ ಎಂದು ಟೋಪಿ ಕಂಪನಿಗಳಲ್ಲಿ ಹಣ ತೊಡಗಿಸಲು ಹೋಗಬೇಡಿ. ಇದರಿಂದ ನೀವು ದುಡಿದ ಹಣವನ್ನು ಕಳೆದುಕೊಳ್ಳುವ ಸಂಭವ ಇರುತ್ತದೆ. ರಾಷ್ಟ್ರೀಕೃತ ಬ್ಯಾಂಕ್ ಗಳು, ಅಂಚೆ ಕಚೇರಿಗಳಲ್ಲಿ ಬಡ್ಡಿ ಕಡಿಮೆ ಬಂದರೂ ನಿಮ್ಮ ಹಣವನ್ನು ತೊಡಗಿಸುವುದು ಒಳ್ಳೆಯದು. ಹಣವು ಬೆಳೆಯುತ್ತೆ, ಬಡ್ಡಿಯೂ ಬರುತ್ತೆ, ನೆಮ್ಮದಿಯು ಸಿಗುತ್ತದೆ ಎನ್ನುತ್ತಾರೆ ತಿಳಿದವರು.