ಉಗುರು ವ್ಯಕ್ತಿತ್ವದ ಅವಿಭಾಜ್ಯ ಅಂಗ. ಉಗುರು ಸುಂದರವಾಗಿಲ್ಲ, ಹೊಳಪಿಲ್ಲವೆಂದ್ರೆ ಇದು ಆತ್ಮವಿಶ್ವಾಸವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ.
ಉಗುರನ್ನು ಸುಂದರಗೊಳಿಸುವ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಾಕಷ್ಟಿವೆ. ಆದ್ರೆ ಅದೆಲ್ಲಕ್ಕಿಂತ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಉಗುರಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಕೆಲವರಿಗೆ ಉಗುರು ಉದುರುವ ಸಮಸ್ಯೆಯಿರುತ್ತದೆ. ಅಂತವರು ನಿಂಬೆ ರಸ ಹಾಗೂ ಉಪ್ಪನ್ನು ಬಳಸಬಹುದು. ಎರಡು ಚಮಚ ಉಪ್ಪಿಗೆ ನಿಂಬೆಯ ಕೆಲ ಹನಿಯನ್ನು ಹಾಕಿ. ಸ್ವಲ್ಪ ಆಲಿವ್ ಆಯಿಲ್ ಹಾಕಿ. ನಂತ್ರ ಉಗುರು ಬೆಚ್ಚಗಿನ ನೀರಿಗೆ ಈ ಮಿಶ್ರಣ ಹಾಕಿ 10-15 ನಿಮಿಷ ಉಗುರನ್ನು ಈ ನೀರಿನಲ್ಲಿ ಇಟ್ಟುಕೊಳ್ಳಿ. ವಾರದಲ್ಲಿ ಎರಡರಿಂದ ಮೂರು ದಿನ ಹೀಗೆ ಮಾಡಿದಲ್ಲಿ ಉಗುರು ಹೊಳಪು ಪಡೆಯುವ ಜೊತೆಗೆ ಉದುರುವ ಸಮಸ್ಯೆ ನಿಲ್ಲುತ್ತದೆ.
ಬಿಯರ್ ಸಹಾಯದಿಂದಲೂ ಉಗುರಿನ ಹೊಳಪನ್ನು ಹೆಚ್ಚಿಸಬಹುದು. ಅರ್ಧ ಕಪ್ ಬಿಯರ್ ಗೆ ಸ್ವಲ್ಪ ಬಿಸಿ ಆಲಿವ್ ಆಯಿಲ್ ಹಾಗೂ ಸ್ವಲ್ಪ ವಿನೆಗರ್ ಹಾಕಿ. 10 ನಿಮಿಷ ಉಗುರನ್ನು ಅದ್ರಲ್ಲಿಟ್ಟುಕೊಳ್ಳಿ.
ವ್ಯಾಸಲೀನ್ ಕೂಡ ಉಗುರು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ದಿನದಲ್ಲಿ ಎರಡು ಬಾರಿ ವ್ಯಾಸಲಿನ್ ಹಚ್ಚಿ ಉಗುರನ್ನು ಮಸಾಜ್ ಮಾಡಬೇಕು.
ಒಳ್ಳೆ ಕಂಪನಿಯ ನೇಲ್ ಪಾಲಿಶ್ ಬಳಸಬೇಕು. ಹಾಗೆ ಒಂದು ಬಾರಿ ಹಚ್ಚಿದ ನೇಲ್ ಪಾಲಿಶ್ ಮೇಲೆಯೇ ಮತ್ತೆ ಹಚ್ಚಿದ್ರೆ ಉಗುರಿನ ಸೌಂದರ್ಯ ಹಾಳಾಗುತ್ತದೆ.