
ಹೃದಯಾಘಾತ ಗಂಭೀರ ಕಾಯಿಲೆಯಾಗಿ ಮಾರ್ಪಟ್ಟಿದೆ. ಭಾರತದಲ್ಲಿಯೂ ಹೃದ್ರೋಗಿಗಳ ಸಂಖ್ಯೆ ಕೋಟಿ ಲೆಕ್ಕದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆ ಕೂಡ ಈ ಕಾಯಿಲೆಗೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಅಕಾಲಿಕವಾಗಿ ಅವರ ಜೀವನವೇ ಅಂತ್ಯವಾಗ್ತಿದೆ.
ಹೆಚ್ಚಿನ ಸಂದರ್ಭಗಳಲ್ಲಿ ಹೃದ್ರೋಗವು ಆನುವಂಶಿಕವಾಗಿರುವುದಿಲ್ಲ. ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಲೇ ಬಂದಿರುತ್ತದೆ. ಹೃದಯಾಘಾತದಿಂದ ಪಾರಾಗಲು ಬಯಸಿದರೆ ನೀವು ನಿಮ್ಮ ಜೀವನ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು. ಇದರ ಜೊತೆಗೆ ಹೃದಯಾಘಾತಕ್ಕೆ ಕಾರಣವಾಗಬಲ್ಲ ಕೆಲವೊಂದು ತಪ್ಪುಗಳನ್ನು ಮಾಡಬಾರದು.
ಕಡಿಮೆ ನಿದ್ದೆ : ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಬೇಕು. ತಜ್ಞರೇ ಹೇಳುವ ಪ್ರಕಾರ ಸಾಕಷ್ಟು ನಿದ್ರೆ ಮಾಡದ ಜನರು ಹೃದಯಾಘಾತ ಅಪಾಯವನ್ನು ಹೊಂದಿರುತ್ತಾರೆ.
ವಾಯು ಮಾಲಿನ್ಯ: ದೊಡ್ಡ ನಗರಗಳಿಗಿಂತ ಹಳ್ಳಿಯ ಜನರಿಗೆ ಹೃದಯಾಘಾತದ ಅಪಾಯ ಕಡಿಮೆ. ಏಕೆಂದರೆ ಹಳ್ಳಿಯಲ್ಲಿರುವವರು ಶುದ್ಧ ಗಾಳಿಯನ್ನು ಉಸಿರಾಡುತ್ತಾರೆ. ಮಹಾನಗರಗಳಲ್ಲಿ ಧೂಳು, ವಾಹನಗಳ ಹೊಗೆಯದ್ದೇ ಅಬ್ಬರ. ಇದು ನಮ್ಮ ಹೃದಯಕ್ಕೆ ಹಾನಿ ಉಂಟುಮಾಡುತ್ತದೆ. ಈದು ಅನೇಕ ಸಂಶೋಧನೆಗಳಲ್ಲೂ ದೃಢಪಟ್ಟಿದೆ.
ಧೂಮಪಾನ ಮತ್ತು ಮದ್ಯಪಾನ: ಸಿಗರೇಟ್ ಮತ್ತು ಮದ್ಯ ನಮ್ಮ ದೇಹಕ್ಕೆ ಆಂತರಿಕವಾಗಿ ಹಾನಿಯನ್ನುಂಟುಮಾಡುತ್ತದೆ. ಮದ್ಯಪಾನ ಮತ್ತು ಧೂಮಪಾನದಂತಹ ಈ ಕೆಟ್ಟ ಅಭ್ಯಾಸಗಳಿಂದಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ. ನಂತರ ಅದು ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಅತಿಯಾದ ಶೀತ ತಾಪಮಾನ: ನೀವು ನಿರಂತರವಾಗಿ ಅತ್ಯಂತ ತಂಪಾದ ತಾಪಮಾನದಲ್ಲಿದ್ದರೆ ಅದು ಕೂಡ ಅಪಾಯ ಉಂಟುಮಾಡುತ್ತದೆ. ಅಪಧಮನಿಗಳು ಕುಗ್ಗಲು ಪ್ರಾರಂಭಿಸುತ್ತವೆ, ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಅತಿಯಾದ ಶೀತ ವಾತಾವರಣದಲ್ಲಿ ಭಾರೀ ಚಟುವಟಿಕೆಗಳನ್ನು ಮಾಡಿದರೆ ಹೃದಯಾಘಾತ ಉಂಟಾಗಬಹುದು.