
ಇಂಟರ್ನೆಟ್‌ನಲ್ಲಿ ಹೊಸ ರೀತಿಯ ವಂಚನೆಯೊಂದು ಬೆಳಕಿಗೆ ಬಂದಿದೆ. ವೈರಸ್ ಬಗ್ಗೆ ತಪ್ಪು ವಾರ್ನಿಂಗ್ ಒಂದು ಕಂಪ್ಯೂಟರ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಮ್ಯಾಕ್‌ಫೀ ಹೆಸರಿನ ಪ್ರಸಿದ್ಧ ಆಂಟಿವೈರಸ್ ಸಾಫ್ಟ್‌ವೇರ್ ಹೆಸರಿನಲ್ಲಿರುತ್ತದೆ. ನಿಮ್ಮ ಕಂಪ್ಯೂಟರ್‌ಗೆ ವೈರಸ್ ಅಟ್ಯಾಕ್ ಆಗಲಿದೆ ಎಂಬ ವಾರ್ನಿಂಗ್ ಜೊತೆಗೆ McAfee ಚಂದಾದಾರಿಕೆಯ ಅವಧಿ ಮುಗಿದಿದೆ ಎಂಬ ಸುಳ್ಳು ವಾರ್ನಿಂಗ್ ಕಾಣಿಸಿಕೊಳ್ಳುತ್ತದೆ. ಇದನ್ನು ಕ್ಲಿಕ್ ಮಾಡಿದ್ರೆ ಬಳಕೆದಾರರು ಮೋಸ ಹೋಗುವುದು ಖಚಿತ.
McAfee ಪಾಪ್‌ಅಪ್ ಹಗರಣ ಎಂದರೇನು ?
ಈ ವಂಚನೆ ಬಹಳ ಸಮಯದಿಂದ ನಡೆಯುತ್ತಿದೆ. ಬಳಕೆದಾರರು ವಾರ್ನಿಂಗ್ ಪಾಪ್-ಅಪ್ ಅನ್ನು ಕ್ಲಿಕ್ ಮಾಡಿ ಅವರ ವೈಯಕ್ತಿಕ ಮತ್ತು ಬ್ಯಾಂಕಿಂಗ್ ಮಾಹಿತಿಯನ್ನು ಭರ್ತಿ ಮಾಡುತ್ತಾರೆ. ನಂತರ ವಂಚಕರು ಈ ಮಾಹಿತಿಯನ್ನು ಬಳಸಿಕೊಂಡು ಮೋಸ ಮಾಡುತ್ತಾರೆ.
ಈ ವಂಚಕರು ನಿಮ್ಮ ಮಾಹಿತಿಯನ್ನು ಕದಿಯಲು ಎರಡು ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ. ಮೊದಲಿಗೆ ಬಳಕೆದಾರರನ್ನು ನಕಲಿ ವೆಬ್‌ಸೈಟ್‌ಗೆ ಕರೆದೊಯ್ಯುತ್ತಾರೆ, ಅಲ್ಲಿ ಎಂಟಿವೈರಸ್ ಸಾಫ್ಟ್‌ವೇರ್‌ಗೆ ಮರು-ಚಂದಾದಾರರಾಗುವಂತೆ ಕೇಳುತ್ತಾರೆ. ಈ ನವೀಕರಣಕ್ಕಾಗಿ ಬಳಕೆದಾರರು ಹಣಕಾಸಿನ ಮಾಹಿತಿ ಸೇರಿದಂತೆ ಅಗತ್ಯವಿರುವ ಮಾಹಿತಿಯನ್ನು ನಮೂದಿಸುತ್ತಾರೆ. ವಾಸ್ತವವಾಗಿ ನವೀಕರಣ ಮತ್ತು ಪಾವತಿಗಾಗಿ ನೀಡಿದ ಮಾಹಿತಿಯು ವಂಚಕರಿಗೆ ಹೋಗುತ್ತದೆ. ಹೆಚ್ಚುವರಿಯಾಗಿ ಬಳಕೆದಾರರು ತಮ್ಮ ಕಾರ್ಡ್ ವಿವರಗಳು, ವಿಳಾಸ ಇತ್ಯಾದಿಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾರೆ.
ಕಂಪ್ಯೂಟರ್‌ನಲ್ಲಿ ಅಪಾಯಕಾರಿ ಪ್ರೋಗ್ರಾಂ ಅನ್ನು ಸ್ಥಾಪಿಸುವುದು ಇನ್ನೊಂದು ವಿಧಾನ. ರೆಡಿಮೇಡ್ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಅದು ನಿಮ್ಮ ಕಂಪ್ಯೂಟರ್‌ಗೆ ಪ್ರೋಗ್ರಾಂ ಅನ್ನು ಪರಿಚಯಿಸುತ್ತದೆ. ಸಿಸ್ಟಮ್‌ನ ಸುರಕ್ಷತೆಯನ್ನು ದುರ್ಬಲಗೊಳಿಸುತ್ತದೆ. ಈ ಪ್ರೋಗ್ರಾಂನ ಸಹಾಯದಿಂದ ಹ್ಯಾಕರ್‌ಗಳು ನಮ್ಮ ಅನುಮತಿಯಿಲ್ಲದೆ ಕಂಪ್ಯೂಟರ್‌ಗೆ ಪ್ರವೇಶಿಸಬಹುದು. ಅಲ್ಲಿಂದ ನಿಮ್ಮ ಪ್ರಮುಖ ವಿಷಯಗಳನ್ನು ಅಂದರೆ ಪಾಸ್‌ವರ್ಡ್‌ಗಳು, ಕಾರ್ಡ್ ಮಾಹಿತಿ ಮತ್ತಿತರ ವಿವರಗಳನ್ನು ಕದಿಯಬಹುದು.