ಅಕ್ಟೋಬರ್ ಹಬ್ಬಗಳ ತಿಂಗಳು. ಹಾಗಾಗಿ ತಿಂಗಳ ಅನೇಕ ದಿನ ಕಚೇರಿಗಳಿಗೆ ರಜೆ ಇರುತ್ತದೆ. ಮಕ್ಕಳಿಗೂ ಇದು ರಜಾ ತಿಂಗಳು. ರಜೆಯನ್ನು ಎಂಜಾಯ್ ಮಾಡ ಬಯಸುವವರು ಈಗಿನಿಂದಲೇ ಪ್ರವಾಸಕ್ಕೆ ಪ್ಲಾನ್ ಮಾಡಿ. ಕೆಲವೊಂದು ಸುಂದರ ಪ್ರದೇಶ, ಅಲ್ಲಿನ ಹಬ್ಬ ಹಾಗೂ ವಿಶೇಷ ತಿಂಡಿಗಳ ಸವಿಯನ್ನು ಸವಿದು ಬನ್ನಿ.
ನವರಾತ್ರಿ ಹಬ್ಬವನ್ನು ಇಡೀ ದೇಶದಲ್ಲಿ ವಿಶೇಷವಾಗಿ, ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. ಕೊಲ್ಕತ್ತಾದಲ್ಲಿ ಕೂಡ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಬಂಗಾಳದಲ್ಲಿ ದುರ್ಗಾ ಪೂಜೆಯನ್ನು ಹೇಗೆ ಆಚರಣೆ ಮಾಡಲಾಗುತ್ತದೆ ಎಂಬುದನ್ನು ಅಲ್ಲಿ ಹೋಗಿ ನೋಡಬೇಕು. ಅಲ್ಲಿನ ಪದ್ಧತಿ, ಆಚರಣೆಯನ್ನು ಕಣ್ತುಂಬಿಕೊಂಡು, ಪ್ರಸಾದದ ರುಚಿ ನೋಡಿ ಬನ್ನಿ.
ಬನಾರಸ್ ನ ದೀಪಾವಳಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ನವರಾತ್ರಿಯಿಂದ ದೀಪಾವಳಿಯವರೆಗೂ ಇಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುವ ಬನಾರಸ್ ಸೌಂದರ್ಯ ಸವಿಯಲು ದೇಶ-ವಿದೇಶಗಳಿಂದ ಜನರು ಇಲ್ಲಿಗೆ ಬರ್ತಾರೆ.
ಚಳಿಗಾಲದಲ್ಲಿ ದೆಹಲಿ ಸುತ್ತುವ ಮಜವೇ ಬೇರೆ. ಅದ್ರಲ್ಲೂ ಹಬ್ಬದ ಸಮಯದಲ್ಲಿ ವಿಶೇಷ ಉತ್ಸವ, ಮಾರುಕಟ್ಟೆಗಳು ರಂಗು ಪಡೆಯುತ್ತವೆ. ದೆಹಲಿ ಆಹಾರ ಹಾಗೂ ಶಾಪಿಂಗ್ ನಿಮ್ಮ ರಜೆಯನ್ನು ಮತ್ತಷ್ಟು ಸುಂದರಗೊಳಿಸುತ್ತದೆ.
ರಾಜಸ್ಥಾನದ ಜೈಪುರ ಪಿಂಕ್ ಸಿಟಿ ಎಂದೇ ಹೆಸರು ಪಡೆದಿದೆ. ಅಕ್ಟೋಬರ್ ನಲ್ಲಿ ಈ ನಗರದ ಬಣ್ಣ ಗುಲಾಬಿಯಾಗುತ್ತದೆ. ಈ ನಗರವನ್ನು ಸುತ್ತುವ ಜೊತೆ ಹಬ್ಬಕ್ಕೆ ಖರೀದಿಯನ್ನೂ ಮಾಡಬಹುದಾಗಿದೆ.