ಮಹಿಳೆಯರಲ್ಲಿ ನೇಲ್ ಪಾಲಿಶ್ ಕ್ರೇಝ್ ಹೆಚ್ಚು. ಕೈಗಳು ಸುಂದರವಾಗಿ ಕಾಣಬೇಕೆಂಬ ಬಯಕೆಯಿಂದ ಹಸ್ತಾಲಂಕಾರ ಮಾಡಿಕೊಳ್ತಾರೆ. ಸದಾಕಾಲ ನೇಲ್ ಪಾಲಿಶ್ ಹಚ್ಚಿಕೊಳ್ಳುವ ಅಭ್ಯಾಸ ಮಾಡಿಕೊಂಡಿರ್ತಾರೆ. ವಾರಕ್ಕೆರಡು ಬಾರಿಯಾದರೂ ಬೇರೆ ಬೇರೆ ನೇಲ್ ಪೇಂಟ್ ಹಚ್ಚಿಕೊಳ್ಳುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಂತೂ ನೇಲ್ ಆರ್ಟ್ ಕೂಡ ಫೇಮಸ್ ಆಗುತ್ತಿದೆ. ಆದರೆ ಕೈಗಳ ಅಂದವನ್ನು ಹೆಚ್ಚಿಸುವ ಈ ನೇಲ್ ಪಾಲಿಶ್‌ಗಳು ಆರೋಗ್ಯಕ್ಕೆ ಅಪಾಯಕಾರಿಯಾದ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುತ್ತವೆ.
ಫಾರ್ಮಾಲ್ಡಿಹೈಡ್, ಟೊಲ್ಯೂನ್ ಮತ್ತು ಡಿಪ್ರೊಪಿಲ್ ಥಾಲೇಟ್‌ನಂತಹ ಅನೇಕ ರಾಸಾಯನಿಕಗಳು ನೇಲ್ ಪಾಲಿಷ್‌ನಲ್ಲಿ ಕಂಡುಬರುತ್ತವೆ. ಈ ಎಲ್ಲಾ ರಾಸಾಯನಿಕಗಳು ನಮಗೆ ಹಾನಿ ಮಾಡಬಲ್ಲವು. ಅವುಗಳನ್ನು ನಿರಂತರವಾಗಿ ಮತ್ತು ದೀರ್ಘಕಾಲದವರೆಗೆ ಬಳಸುವುದರಿಂದ ಚರ್ಮದ ಅಲರ್ಜಿ, ಊತ ಮತ್ತು ಕೆಂಪಾಗುವಿಕೆಯಂತಹ ಸಮಸ್ಯೆಗಳು ಉಂಟಾಗಬಹುದು.
ನೇಲ್ ಪಾಲಿಶ್ ರಿಮೂವರ್‌ಗಳು ಕೂಡ ಹಾನಿಕಾರಕ ರಾಸಾಯನಿಕಗಳಿಂದ ಕೂಡಿರುತ್ತವೆ. ಅವುಗಳ ಬಳಕೆಯಿಂದ ಚರ್ಮವು ಶುಷ್ಕ ಮತ್ತು ಒರಟಾಗಬಹುದು. ಚರ್ಮದ ನೈಸರ್ಗಿಕ ಎಣ್ಣೆ ನಷ್ಟವಾಗುತ್ತದೆ. ಇದರಿಂದ ಸೋಂಕು ಮತ್ತು ಬ್ಯಾಕ್ಟೀರಿಯಾದ ಅಪಾಯ ಹೆಚ್ಚುತ್ತದೆ.
ನೇಲ್ ಪಾಲಿಶ್‌ನಲ್ಲಿರುವ ರಾಸಾಯನಿಕಗಳು ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ನೇಲ್ ಪೇಂಟ್ ಹಾಕಿಕೊಳ್ಳುವಾಗ ಮಾಸ್ಕ್ ಧರಿಸಿ. ಅದರಲ್ಲಿರುವ ಟ್ರೈಫಿನೈಲ್ ಫಾಸ್ಫೇಟ್ ಶ್ವಾಸಕೋಶಕ್ಕೆ ಹಾನಿಕಾರಕವಾಗಿದೆ. ಇದು ಶ್ವಾಸಕೋಶದಲ್ಲಿ ಊತವನ್ನು ಉಂಟುಮಾಡುತ್ತದೆ, ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಅಸ್ತಮಾದಂತಹ ರೋಗಗಳೂ ಬರಬಹುದು.
ಇನ್ನು ಗರ್ಭಿಣಿಯರಿಗೆ ಈ ನೇಲ್ ಪಾಲಿಶ್ ಕೆಮಿಕಲ್‌ಗಳು ಇನ್ನಷ್ಟು ಅಪಾಯಕಾರಿಯಾಗಬಹುದು. ಇದು ಭ್ರೂಣಕ್ಕೆ ತಲುಪಿ ಜನನ ದೋಷ ಉಂಟಾಗುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ನೇಲ್ ಪಾಲಿಶ್ ಬಳಸಬೇಡಿ.
ನೇಲ್ ಪಾಲಿಶ್‌ನಲ್ಲಿರುವ ಟೊಲ್ಯೂನ್, ಫಾರ್ಮಾಲ್ಡಿಹೈಡ್ ಮತ್ತು ಡೈಥೈಲ್ ಥಾಲೇಟ್‌ನಂತಹ ರಾಸಾಯನಿಕಗಳು ದೇಹದ ಇತರ ಭಾಗಗಳಂತೆ ಮೆದುಳನ್ನು ತಲುಪುತ್ತವೆ. ಈ ರಾಸಾಯನಿಕಗಳು ಮೆದುಳಿನ ಕೋಶಗಳನ್ನು ಹಾನಿಗೊಳಿಸುತ್ತವೆ. ಇದರಿಂದಾಗಿ ಮೆದುಳಿನಲ್ಲಿ ರಕ್ತ ಪರಿಚಲನೆಯು ಅಡ್ಡಿಯಾಗುತ್ತದೆ. ನಿಮಗೆ ತೀವ್ರ ತಲೆನೋವು ಬರಬಹುದು. ಅನೇಕರಿಗೆ ವಾಕರಿಕೆ ಮತ್ತು ವಾಂತಿ ಕೂಡ ಆಗುತ್ತದೆ.