ಪ್ರಸ್ತುತ ನಮ್ಮ ಆಹಾರ ಪದ್ಧತಿಯೇ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಒಂದಿಲ್ಲೊಂದು ರೀತಿಯ ಸಮಸ್ಯೆ ಬರುತ್ತಲೇ ಇರುತ್ತದೆ. ಯಾವ ಆಹಾರವು ಆರೋಗ್ಯಕರ ಮತ್ತು ಯಾವುದು ಅನಾರೋಗ್ಯಕರ ಎಂದು ನಿರ್ಧರಿಸುವುದೇ ಕಷ್ಟವಾಗಿದೆ. ಸಾಮಾನ್ಯವಾಗಿ ಕರಿದ ಪದಾರ್ಥಗಳನ್ನು ತಿಂದಾಗ ಹೊಟ್ಟೆಯಲ್ಲಿ ಸಮಸ್ಯೆಯಾಗುತ್ತದೆ.
ಮಲಬದ್ಧತೆ, ಗ್ಯಾಸ್, ಅಸಿಡಿಟಿ, ಹೊಟ್ಟೆ ಉಬ್ಬರಿಸುವುದು ಹೀಗೆ ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದು ನಮ್ಮ ದೈನಂದಿನ ಜೀವನದ ಸಾಮಾನ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಹೊಟ್ಟೆಯ ಸಮಸ್ಯೆಗಳನ್ನು ತಪ್ಪಿಸಲು ನಾವು ಆಹಾರ ಸೇವನೆ ಮಾಡುವಾಗಲೇ ಕಾಳಜಿ ವಹಿಸಬೇಕು.
ನೀರು ಕುಡಿಯಿರಿ: ಆಹಾರವನ್ನು ಸೇವಿಸುವ ಮೊದಲು ಸ್ವಲ್ಪ ಸಮಯದ ಮೊದಲು ನೀರನ್ನು ಕುಡಿಯುವುದು ಅವಶ್ಯಕ. ಉತ್ತಮ ಆರೋಗ್ಯಕ್ಕಾಗಿ ಯಾವಾಗಲೂ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ. ಆಗ ಜೀರ್ಣಕ್ರಿಯೆ ಸೇರಿದಂತೆ ದೇಹದ ಎಲ್ಲಾ ಕಾರ್ಯಗಳು ಸರಿಯಾಗಿರುತ್ತವೆ. ದಿನಕ್ಕೆ ನೀವು ಕನಿಷ್ಟ 8 ರಿಂದ 10 ಗ್ಲಾಸ್ ನೀರನ್ನು ಕುಡಿಯಬೇಕು. ಅಥವಾ ನೀರಿನಂಶ ಹೆಚ್ಚಿರುವ ಇಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಶುಂಠಿ ಸೇವಿಸಿ : ನಿಮ್ಮ ದೈನಂದಿನ ಆಹಾರದಲ್ಲಿ ಸೀಮಿತ ಪ್ರಮಾಣದಲ್ಲಿ ಶುಂಠಿಯನ್ನು ಸೇರಿಸಿದರೆ, ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆ ದೂರವಾಗುತ್ತದೆ. ಶುಂಠಿ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಅನೇಕ ಕಾಯಿಲೆಗಳನ್ನು ಸಹ ಗುಣಪಡಿಸುತ್ತದೆ. ನೀವು ಹಸಿ ಶುಂಠಿಯನ್ನು ಅಗಿಯಬಹುದು, ಅಥವಾ ಶುಂಠಿ ಚಹಾ, ಶುಂಠಿ ಕಷಾಯ, ಶುಂಠಿ ಕ್ಯಾಂಡಿ ಸೇವನೆ ಮಾಡಬಹುದು.
ಮೊಸರು ಸೇವಿಸಿ: ನಿಯಮಿತವಾಗಿ ಮೊಸರು ಸೇವನೆ ಮಾಡುವುದರಿಂದ ಉದರ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ಪ್ರೋಬಯಾಟಿಕ್ ಆಹಾರವಾಗಿದ್ದು, ಉತ್ತಮ ಬ್ಯಾಕ್ಟೀರಿಯಾಗಳು ಹೇರಳವಾಗಿ ಕಂಡುಬರುತ್ತವೆ. ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಲು ಮೊಸರು ಸಹಾಯ ಮಾಡುತ್ತದೆ. ಇದರ ಪರಿಣಾಮ ತಣ್ಣಗಿರುವುದರಿಂದ ಹೊಟ್ಟೆಯನ್ನೂ ತಂಪಾಗಿಟ್ಟು ಆಹಾರವನ್ನು ಬೇಗ ಜೀರ್ಣ ಮಾಡುತ್ತದೆ.
ವಾಕಿಂಗ್: ಊಟವಾದ ತಕ್ಷಣ ಹಾಸಿಗೆಯ ಮೇಲೆ ಮಲಗುವ ಅಭ್ಯಾಸ ಅನೇಕರಿಗೆ ಇದೆ, ಇದನ್ನು ಮಾಡಬೇಡಿ. ಆಹಾರ ಸೇವನೆಯ ನಂತರ 10 ರಿಂದ 15 ನಿಮಿಷಗಳ ಕಾಲ ನಡೆಯಿರಿ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮಲಬದ್ಧತೆ ಅಥವಾ ಗ್ಯಾಸ್‌ನಂತಹ ಸಮಸ್ಯೆಗಳು ಬರುವುದಿಲ್ಲ.