
ತಲೆ ಹೊಟ್ಟು ಸಮಸ್ಯೆ ಕಾಡುವುದು ಸಹಜ. ಬಿಸಿಲಿಗೆ ಹೋಗಿ ಬಂದಾಗ ಇಲ್ಲವೇ ಬೆವರಿದಾಗ ತಲೆಯಲ್ಲಿ ಉಳಿಯುವ ತೇವಾಂಶ ಹೊಟ್ಟಿನ ಹುಟ್ಟಿಗೆ ಕಾರಣವಾಗುತ್ತದೆ. ಹಲವರಿಗೆ ಪ್ರತಿ ದಿನ ತಲೆಗೆ ಸ್ನಾನ ಮಾಡಲು ಸಾಧ್ಯವಾಗದಿರಬಹುದು. ದುಬಾರಿ ಮೊತ್ತದ ಶ್ಯಾಂಪು ಕೊಳ್ಳಲು ಸಾಧ್ಯವಾಗದಿರಬಹುದು. ಆಗ ಈ ಸರಳ ಉಪಾಯವನ್ನು ಪಾಲಿಸಿ ನೋಡಿ.
ದಪ್ಪನೆಯ ಮೊಸರು ಹೊಟ್ಟನ್ನು ಹೋಗಲಾಡಿಸಲು ರಾಮಬಾಣ. ಸ್ನಾನಕ್ಕೆ ೨೦ ನಿಮಿಷಗಳ ಮುನ್ನ ಮೊಸರನ್ನು ಹಚ್ಚಿ ಬಳಿಕ ಸ್ವಚ್ಛವಾಗಿ ತೊಳೆದುಕೊಳ್ಳಿ. ಇದು ಕೂದಲಿನ ಆರೋಗ್ಯಕ್ಕೂ ಒಳ್ಳೆಯದು.
ತೆಂಗಿನೆಣ್ಣೆಯಿಂದ ಮಸಾಜ್ ಮಾಡಿ ಅರ್ಧಗಂಟೆ ಬಳಿಕ ತೊಳೆಯಬೇಕು. ಸತತ ಎಂಟು ವಾರಗಳ ಕಾಲ ಹೀಗೆ ಮಾಡಿದರೆ ಹೊಟ್ಟಿನ ಸಮಸ್ಯೆಯಿಂದ ದೂರವಿರಬಹುದು.
ವಾರಕ್ಕೆರಡು ಬಾರಿ ಅಲೋವೇರಾ ಜಜ್ಜಿ ರಸವನ್ನು ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ಬಳಿಕ ತೊಳೆದುಕೊಂಡರೆ ಕೆಲವೇ ದಿನಗಳಲ್ಲಿ ಹೊಟ್ಟು ಮಾಯವಾಗುತ್ತದೆ.
ಕೂದಲ ಬುಡ ಸಿಗಿದು ಎರಡಾಗಿ ವಿಭಾಗವಾಗಿದ್ದರೆ ತುದಿಗೆ ನಿಂಬೆರಸ ಸೇರಿಸಿ. ಇದರಿಂದ ಕೂದಲು ಜೋಡಣೆಯಾಗಿ ಸೊಂಪಾಗಿ ಬೆಳೆಯುತ್ತದೆ.
ಸಾಧ್ಯವಾದಷ್ಟು ನಿಮ್ಮ ತಲೆ ಒದ್ದೆಯಾಗಿರಲು ಬಿಡದೆ ಒಣಗಿಸಿ. ನಿಮ್ಮ ಆಹಾರದಲ್ಲಿ ಹೇರಳವಾಗಿ ಪೋಷಕಾಂಶಗಳನ್ನು ಸೇವಿಸುವುದರಿಂದ ತಲೆಯಲ್ಲಿ ಹೊಟ್ಟಾಗುವುದನ್ನು ಕೂದಲು ಉದುರುವುದನ್ನು ತಡೆಯಬಹುದು.