ಭೋಪಾಲ್: ಇಬ್ಬರು ಮಹಿಳೆಯರು ತಮ್ಮ ಸ್ವಂತ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ಬಯಸಿದರೆ ನ್ಯಾಯಾಲಯವು ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಇಂದು ಹೇಳಿದೆ.
22ರ ಹರೆಯದ ಮಹಿಳೆಯೊಂದಿಗೆ ಮನೆಯಿಂದ ಓಡಿಹೋಗಿದ್ದ 18 ವರ್ಷದ ಬಾಲಕಿಯ ತಂದೆ ಸಲ್ಲಿಸಿದ್ದ ಕಸ್ಟಡಿ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿ ಈ ರೀತಿ ಆದೇಶಿಸಿದೆ.
ಜಬಲ್ ಪುರದ ಹದಿಹರೆಯದ ಹುಡುಗಿ ಮತ್ತು ಆಕೆಯೊಂದಿಗೆ ಓಡಿಹೋದ ಮಹಿಳೆ ಇಬ್ಬರೂ ಮಕ್ಕಳಾಗಿನಿಂದಲೂ ಒಟ್ಟಿಗೆ ಬೆಳೆದವರು. ಅವರು ಒಟ್ಟಿಗೆ ಅಧ್ಯಯನ ಮಾಡಿದರು. ಕಾಲಾನಂತರದಲ್ಲಿ ಭಾವನಾತ್ಮಕವಾಗಿ ಅವರು ಒಂದಾಗಿದ್ದು, ಈಗ ಪ್ರತ್ಯೇಕವಾಗಿ ಬದುಕಲು ಸಿದ್ಧರಿಲ್ಲ. ಒಟ್ಟಿಗೆ ಇರಲು ಬಯಸಿದ್ದಾರೆ.
ಮನೆಯವರಿಗೆ ವಿಷಯ ತಿಳಿದಾಗ ಇಬ್ಬರು ಓಡಿಹೋದರು. ಹದಿಹರೆಯದವರ ತಂದೆ ಕಳೆದ ತಿಂಗಳು ತನ್ನ ಮಗಳನ್ನು ಕಸ್ಟಡಿಗೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ತನ್ನ ಮಗಳು ಮಹಿಳಾ ಸ್ನೇಹಿತೆ ಜೊತೆಯಲ್ಲಿ ಉಳಿಯುವ ಬದಲು ಕುಟುಂಬದೊಂದಿಗೆ ಇರುವಂತೆ ಮನವೊಲಿಸಲು ಪ್ರಯತ್ನಿಸಿದೆ ಆದರೆ ಅವಳು ಒಪ್ಪಲಿಲ್ಲ ಎಂದು ತಂದೆ ನ್ಯಾಯಾಲಯಕ್ಕೆ ತಿಳಿಸಿದರು.
ಅರ್ಜಿಯನ್ನು ಸ್ವೀಕರಿಸಿದ ಹೈಕೋರ್ಟ್ ಬಾಲಕಿಗೆ ನೋಟಿಸ್ ಜಾರಿ ಮಾಡಿ, ಹಾಜರಾಗುವಂತೆ ಸೂಚಿಸಿದೆ.
ಹುಡುಗಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ, ಆಕೆಗೆ ನಿರ್ಧರಿಸಲು ಒಂದು ಗಂಟೆ ನೀಡಲಾಯಿತು. ಆದರೆ, ತನ್ನ ಸ್ನೇಹಿತೆಯೊಂದಿಗೆ ವಾಸಿಸಲು ಅವಕಾಶ ಮಾಡಿಕೊಡುವಂತೆ ಆಕೆ ಮನವಿ ಮಾಡಿದ್ದಾಳೆ.
ಹುಡುಗಿ ವಯಸ್ಕಳಾಗಿದ್ದು, ಜೀವನದ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳಬಹುದು. ತಮ್ಮ ಸ್ವಂತ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ಬಯಸಿದರೆ ನ್ಯಾಯಾಲಯ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.